ಆಸ್ಟ್ರೇಲಿಯಾದಲ್ಲಿ 2018 ರಲ್ಲಿ ಯುವತಿಯನ್ನು ಹತ್ಯೆಗೈದಿದ್ದ ಭಾರತೀಯ ನರ್ಸಿಂಗ್ ಅಸಿಸ್ಟೆಂಟ್ ಬಂಧನ

ಆರೋಪಿ ಬಗ್ಗೆ ಸುಳಿವು ನೀಡಿದವರಿಗೆ 1 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದ್ದ ಪೊಲೀಸರು

Update: 2022-11-25 07:05 GMT

ಹೊಸದಿಲ್ಲಿ: ಆಸ್ಟ್ರೇಲಿಯಾದ (Australia) ಕ್ವೀನ್ಸ್ ಲ್ಯಾಂಡ್‍ನಲ್ಲಿ 2018 ರಲ್ಲಿನ ಅಲ್ಲಿನ ಯುವತಿಯೊಬ್ಬರನ್ನು ಹತ್ಯೆಗೈದ ಆರೋಪ ಎದುರಿಸುತ್ತಿದ್ದ ಭಾರತೀಯ ವ್ಯಕ್ತಿಯೊಬ್ಬನನ್ನು ದಿಲ್ಲಿ (Delhi) ಪೊಲೀಸರು ಇಂದು ಬಂಧಿಸಿದ್ದಾರೆ. ಆರೋಪಿಯನ್ನು ರಾಜ್ವೀಂದರ್ ಸಿಂಗ್ (38) ಎಂದು ಗುರುತಿಸಲಾಗಿದೆ. ಆತ ವೃತ್ತಿಯಲ್ಲಿ ನರ್ಸಿಂಗ್ ಅಸಿಸ್ಟೆಂಟ್ ಆಗಿದ್ದಾನೆ.

ಫಾರ್ಮಸಿ ಉದ್ಯೋಗಿಯಾಗಿದ್ದ 24 ವರ್ಷದ ಟೋಯಾಹ್ ಕೋರ್ಡಿಂಗ್ಲೇ ಎಂಬಾಕೆ ತನ್ನ ನಾಯಿಯೊಂದಿಗೆ  ಕ್ವೀನ್ಸ್‍ಲ್ಯಾಂಡ್‍ನ ವಂಗೆಟ್ಟಿ ಬೀಚಿನಲ್ಲಿ ವಾಕಿಂಗ್ ಮಾಡುತ್ತಿದ್ದಾಗ ಆಕೆಯನ್ನು ರಾಜ್ವೀಂದರ್ ಸಿಂಗ್ ಹತ್ಯೆಗೈದಿದ್ದಾನೆಂದು ಆರೋಪಿಸಲಾಗಿತ್ತು. ಈ ಘಟನೆ ನಡೆದ ಎರಡು ದಿನಗಳಲ್ಲಿಯೇ ಸಿಂಗ್ ಅಲ್ಲಿದ್ದ ತನ್ನ ಪತ್ನಿ, ಮೂವರು ಮಕ್ಕಳು ಹಾಗೂ ಉದ್ಯೋಗವನ್ನೂ ತೊರೆದು ಭಾರತಕ್ಕೆ ಪಲಾಯನಗೈದಿದ್ದ.

ಕೋರ್ಡಿಂಗ್ಲೆ ನಾಪತ್ತೆಯಾಗಿರುವ ದೂರನ್ನು ಅಕ್ಟೋಬರ್ 21, 2018 ರಂದು ದಾಖಲಾಗಿದ್ದರೆ ಮರುದಿನ ಬೀಚಿನಲ್ಲಿ ಆಕೆಯ ಮೃತದೇಹ ದೊರಕಿತ್ತು.

ಆರೋಪಿ ಬಗ್ಗೆ ಸುಳಿವು ನೀಡಿದವರಿಗೆ 1 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ನೀಡುವುದಾಗಿ ಕ್ವೀನ್ಸ್‍ಲ್ಯಾಂಡ್ ಪೊಲೀಸರು ಘೋಷಿಸಿದ್ದರು. ಯಾವುದೇ ಆರೋಪಿಯನ್ನು ಪತ್ತೆಹಚ್ಚಲು ಇಷ್ಟು ದೊಡ್ಡ ಮೊತ್ತದ ಬಹುಮಾನವನ್ನು ಅಲ್ಲಿನ ಪೊಲೀಸರು ಅಲ್ಲಿಯ ತನಕ ಘೋಷಿಸಿರಲಿಲ್ಲ.

ಮಾರ್ಚ್ 2021 ರಲ್ಲಿ ಆಸ್ಟ್ರೇಲಿಯಾ ಸರಕಾರ ಸಿಂಗ್ ಬಗ್ಗೆ ಮಾಹಿತಿ ಪಡೆದು ಆತನನ್ನು ಭಾರತದಿಂದ ಗಡೀಪಾರು ಮಾಡುವಂತೆ ಭಾರತ ಸರಕಾರವನ್ನು ಕೋರಿತ್ತು. ಈ ಮನವಿಯನ್ನು ಈ ವರ್ಷದ ನವೆಂಬರ್ ತಿಂಗಳಿನಲ್ಲಿ ಸರ್ಕಾರ ಅನುಮೋದಿಸಿತ್ತು.

ಪಂಜಾಬ್‍ನ ಬುಟ್ಟರ್ ಕಲನ್ ಮೂಲದವನಾದ ಆರೋಪಿ ಆಸ್ಟ್ರೇಲಿಯಾದ ಇನ್ನಿಸ್‍ಫೈಲ್ ಪಟ್ಟಣದಲ್ಲಿ ನರ್ಸಿಂಗ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದ.

ಇದನ್ನೂ ಓದಿ: ಗಡಿ ವಿವಾದ: ಕರ್ನಾಟಕದ ಬಸ್ಸಿಗೆ ಕಪ್ಪುಮಸಿ ಬಳಿದ ಮರಾಠ ಸಂಘದ ಕಾರ್ಯಕರ್ತರು

Similar News