ಸೂಟ್‌ಕೇಸ್‌ನಲ್ಲಿ ಮೃತದೇಹದ ಅವಶೇಷ ಪತ್ತೆ: ಶ್ರದ್ಧಾ ಹತ್ಯೆ ಪ್ರಕರಣದೊಂದಿಗೆ ನಂಟಿನ ಶಂಕೆ

Update: 2022-11-25 15:56 GMT

 
ಹೊಸದಿಲ್ಲಿ, ನ. 25:  ಹರ್ಯಾಣದ ಫರೀದಾಬಾದ್ ನ ಅರಣ್ಯ ಪ್ರದೇಶದಲ್ಲಿ ಗುರುವಾರ ಅಪರಾಹ್ ನ  ಸೂಟ್ಕೇಸ್‌ ನಲ್ಲಿ ಪತ್ತೆಯಾದ ಮೃತದೇಹದ ಅವಶೇಷಗಳು ದಿಲ್ಲಿಯಲ್ಲಿ ತನ್ನ ಲಿವ್ ಇನ್ ಪಾರ್ಟ್ ನರ್ ನಿಂದ ಹತ್ಯೆಗೀಡಾದ ಮುಂಬೈಯ 27 ವರ್ಷದ ಯುವತಿ ಶ್ರದ್ಧಾ ವಾಲ್ಕರ್ ಅವರದ್ದೆಂದು ಶಂಕಿಸಲಾಗಿದೆ. 

ಸೂರಜ್ಕುಂಡ್ ನ ಅರಣ್ಯ ಪ್ರದೇಶದಲ್ಲಿ ಮೃತದೇಹದ ಅವಶೇಷಗಳು ಇದ್ದ ಸೂಟ್ಕೇಸ್ ಪತ್ತೆಯಾದ ಹಿನ್ನೆಲೆಯಲ್ಲಿ ಫರೀದಾಬಾದ್ ಪೊಲೀಸರು ದಿಲ್ಲಿ ಪೊಲೀಸರನ್ನು ಸಂಪರ್ಕಿಸಿದ್ದರು.  ಮೃತದೇಹದ ಅವಶೇಷಗಳನ್ನು ಪ್ಲಾಸ್ಟಿಕ್ ಬ್ಯಾಗ್ ಹಾಗೂ ಗೋಣಿಯಲ್ಲಿ ಸುತ್ತಲಾಗಿದೆ. ಬಟ್ಟೆಗಳು ಹಾಗೂ ಬೆಲ್ಟ್ ಸೂಟ್ಕೇಸ್ ನ ಸಮೀಪ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಮೇಲ್ ನೋಟಕ್ಕೆ ಬೇರೆ ಕಡೆ ಹತ್ಯೆ ಮಾಡಲಾಗಿದೆ ಹಾಗೂ ಗುರುತು ಹಿಡಿಯದಿರಲು ಮೃತದೇಹದ ಅವಶೇಷಗಳನ್ನು ಇಲ್ಲಿ ಎಸೆಯಲಾಗಿದೆ ಎಂದು ಫರೀದಾಬಾದ್ ಪೊಲೀಸರು  ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಫರೀದಾಬಾದ್ ಪೊಲೀಸರು ದಿಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರದ್ಧಾ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ದಕ್ಷಿಣ ದಿಲ್ಲಿಯ ಮೆಹ್ರೌಲಿ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿದೆ ಹಾಗೂ ತನಿಖೆಯಲ್ಲಿ ತೊಡಗಿದೆ. ಸೂಟ್ಕೇಸ್ ನಲ್ಲಿ ಪತ್ತೆಯಾದ ಮೃತದೇಹದ ಭಾಗಗಳು ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದೊಂದಿಗೆ ನಂಟು ಹೊಂದಿರಬಹುದು ಎಂದು ದಿಲ್ಲಿ ಪೊಲೀಸರು ಶಂಕಿಸಿದ್ದಾರೆ. 

ಮೃತದೇಹದ ಭಾಗಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Similar News