ಉಲ್ಬಣಿಸಿದ ಕರ್ನಾಟಕ- ಮಹಾರಾಷ್ಟ್ರ ಗಡಿವಿವಾದ: ಬೊಮ್ಮಾಯಿ ಹೇಳಿಕೆಗೆ ಮರಾಠಿ ಗುಂಪುಗಳ ಪ್ರತಿಭಟನೆ

ಕರ್ನಾಟಕದ ಬಸ್ ಗಳಿಗೆ ಮಸಿ ಬಳಿದು ಪುಂಡಾಟ

Update: 2022-11-25 16:06 GMT

ಪುಣೆ,ನ.25:    ಕರ್ನಾಟಕ- ಮಹಾರಾಷ್ಟ್ರ ಗಡಿವಿವಾದದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದ ಹೇಳಿಕೆಯನ್ನು ಖಂಡಿಸಿ ಮರಾಠ ಸಂಘಟನೆಗಳ ಕಾರ್ಯಕರ್ತರು  ಶುಕ್ರವಾರ ಮಹಾರಾಷ್ಟ್ರದ ವಿವಿಧೆಡೆ ಪ್ರತಿಭಟನೆ ನಡೆಸಿದ್ದಾರೆ.  ಎರಡೂ ರಾಜ್ಯಗಳ ನಡುವೆ  ಸಂಚರಿಸುತ್ತಿರುವ  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ  ಬಸ್ ಗಳ ಮೇಲೆ ಕಪ್ಪು ಮಸಿ ಬಳಿದು ಮಹಾರಾಷ್ಟ್ರ ಪರ ಘೋಷಣೆಗಳನ್ನು ಬರೆದಿದ್ದಾರೆ.

ಬೆಳಗಾವಿ ಜಿಲ್ಲೆಯ ಗಡಿಭಾಗದಲ್ಲಿರುವ ಮಹಾರಾಷ್ಟ್ರದ ಕೆಲವು ಗ್ರಾಮಪಂಚಾಯತ್ಗಳು ಕರ್ನಾಟಕದ ಜೊತೆ ವಿಲೀನಗೊಳ್ಳುವ ಕುರಿತ ನಿರ್ಣಯವನ್ನ್ನು ಅಂಗೀಕರಿಸಿದ್ದಾರೆಂದು ಬೊಮ್ಮಾಯಿ ಇತ್ತೀಚೆಗೆ ಹೇಳಿಕೆ ನೀಡಿರುವುದು ಮರಾಠಿ ಕಾರ್ಯಕರ್ತರನ್ನು  ಕೆರಳಿಸಿದೆ.
ನಿಪ್ಪಾಣಿಯಿಂದ ಔರಂಗಾಬಾದ್ ಗೆ ಸಂಚರಿಸುವ ಬಸ್ ಅನ್ನು ಶುಕ್ರವಾರ ಪುಣೆ ಜಿಲ್ಲೆಯಲ್ಲಿ ತಡೆದು ನಿಲ್ಲಿಸಿದ ಮರಾಠ ಮಹಾಸಂಘದ ಸದಸ್ಯರ ಗುಂಪೊಂದು ‘ಜಹೀರ್ ನಿಷೇಧ್’  (ಪ್ರತಿಭಚನೆ ವ್ಯಕ್ತಪಡಿಸಿ) ಹಾಗೂ ‘ ಜೈ ಮಹಾರಾಷ್ಟ್ರ’ಎಂಬ ಘೋಷಣೆಗಳನ್ನು ಕಪ್ಪು ಮಸಿಯಲ್ಲಿ ಬರೆದು, ಬೊಮ್ಮಾಯಿ ವಿರುದ್ಧ ಘೋಷಣೆಗಳನ್ನು ಕೂಗಿರುವುದಾಗಿ ವರದಿಯಾಗಿದೆ.

‘‘ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಕರ್ನಾಟಕ - ಮಹಾರಾಷ್ಟ್ರ ಗಡಿವಿವಾದದ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಆದರೆ ಅವರ ಕನಸು ಎಂದೂ ನನಸಾಗದು. ನಮ್ಮ ಸರಕಾರವು ಕನ್ನಡ ನಾಡಿನ ನೆಲ, ಜಲ ಹಾಗೂ ಗಡಿಗಳನ್ನು ರಕ್ಷಿಸಲು ಬದ್ಧವಾಗಿದೆ’’ ಎಂದು ಬೊಮ್ಮಾಯಿ ಬುಧವಾರ ಸಂಜೆ ಟ್ವೀಟ್ ಮಾಡಿದ್ದರು.

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರದ ಯಾವುದೇ ಗ್ರಾಮವು ಕರ್ನಾಟಕಕ್ಕೆ ಹೋಗಲಾರದು. ಬೆಳಗಾವಿ-ಕಾರವಾರ- ನಿಪ್ಪಾಣಿ ಸೇರಿದಂತೆ ಮರಾಠಿ ಬಾಷಿಕ ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆಗೊಳಿಸಲು ಮಹಾರಾಷ್ಟ್ರ ನ ಸರಕಾರವು ಸುಪ್ರೀಂಕೋರ್ಟ್ ನಲ್ಲಿ ಪ್ರ್ರಬಲ ಹೋರಾಟ ನಡೆಸಲಿದೆಯೆಂದು ಹೇಳಿಕೆ ನೀಡಿದ ಬೆನ್ನಲ್ಲೇ ಬೊಮ್ಮಾಯಿ ಹೀಗೆ ಟ್ವೀಟಿಸಿದ್ದರು.

ಗಡಿವಿವಾದವು ಮಹಾರಾಷ್ಟ್ರದಲ್ಲಿ ಒಂದು ರಾಜಕೀಯ ಅಸ್ತ್ರವಾಗಿ ಬಿಟ್ಟಿದೆ. ಆ ರಾಜ್ಯದಲ್ಲಿ ಯಾವುದೇ ಪಕ್ಷವು ಅಧಿಕಾರಕ್ಕೆ ಬಂದರೂ, ರಾಜಕೀಯ ಉದ್ದೇಶಕ್ಕಾಗಿ ಅದು ಗಡಿವಿವಾದವನ್ನು  ಕೆದಕುತ್ತದೆ ಎಂದು ಬೊಮ್ಮಾಯಿ ಈ ಮೊದಲು ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದರು.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿರುವ ಕೆಲವು ಗ್ರಾಮಗಳು ನೀರಿನ ತೀವ್ರ ಕೊರತೆಯಿಂದ ಬಳಲುತ್ತಿದ್ದು, ಕರ್ನಾಟಕದೊಂದಿಗೆ ವಿಲೀನವನ್ನು ಕೋರುವ ನಿರ್ಣಯವನ್ನು ಅವು  ಅಂಗೀಕರಿಸಿವೆಯೆಂದು ಬೊಮ್ಮಾಯಿ ಹೇಳಿದ್ದರು.

ಆದಾಗ್ಯೂ ಬೊಮ್ಮಾಯಿ ಅವರ ಹೇಳಿಕೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅಲ್ಲಗಳೆದಿದ್ದರು ಹಾಗೂ ಇತ್ತೀಚಿನ ದಿನಗಳಲ್ಲಿ ಕರ್ನಾಟಕದೊಂದಿಗೆ  ವಿಲೀನವನ್ನು ಬಯಸುವ ಯಾವುದೇ ನಿರ್ಣಯವನ್ನು   ಮಹಾರಾಷ್ಟ್ರದ ಯಾವುದೇ ಗ್ರಾಮವು ಅಂಗೀಕರಿಸಿಲ್ಲವೆಂದು ತಿಳಿಸಿದರು.

ಬೊಮ್ಮಾಯಿ ಹೇಳಿಕೆಗೆ ಸಂಬಂಧಿಸಿ ಗುರುವಾರ ಪ್ರತಿಕ್ರಿಯಿಸಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಶಿಂದೆ ಅವರು, ‘‘ ಮಹಾರಾಷ್ಟ್ರದ ಒಂದೇ ಒಂದು ಇಂಚು ಜಮೀನು ಎಲ್ಲಿಗೂ ಹೋಗಲು ಬಿಡಲಾರೆವು. ಗಡಿಭಾಗದ 40 ಗ್ರಾಮಗಳ  ಸಮಸ್ಯೆಗಳನ್ನು ಬಗೆಹರಿಸುವುದು ನಮ್ಮ ಸರಕಾರದ ಹೊಣೆಗಾರಿಕೆಯಾಗಿದೆ’’  ಎಂದು ಹೇಳಿದ್ದರು.

ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದದ ಕುರಿತ ಕಾನೂನು ಹೋರಾಟದಲ್ಲಿ ತೊಡಗಿರುವ ತನ್ನ ರಾಜ್ಯದ ಕಾನೂನುತಜ್ಞರ ತಂಡದ ಜೊತೆ ಸಮನ್ವಯದಿಂದ ಕಾರ್ಯಾಚರಿಸಲು  ಮುಖ್ಯಮಂತ್ರಿ ಶಿಂಧೆ ಅವರು ತನ್ನ ಸಂಪುಟದ ಇಬ್ಬರು ಸಚಿವರನ್ನು ನಿಯೋಜಿಸಿದ್ದರು.  ಗಡಿವಿವಾದದ ಆಲಿಕೆಯು ನವೆಂಬರ್ 23ರಂದು ಸುಪ್ರೀಂಕೋರ್ಟ್ನಲ್ಲಿ ವಿಚಾರಣೆಗೆ ಬರುವ ನಿರೀಕ್ಷೆಯಿತ್ತಾದರೂ,  ಅನಿರೀಕ್ಷಿತವಾಗಿ ವಿಳಂಬಗೊಂಡಿದೆ.

ಕಲಬುರಗಿಯಲ್ಲಿ ಮಹಾ ಸಾರಿಗೆ ಬಸ್ ಗಳಿಗೆ ಮಸಿ

ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ ಗಳಿಗೆ ಮಸಿ ಬಳಿದ ಘಟನೆಯ ಬೆನ್ನಲ್ಲೇ ಶುಕ್ರವಾರ ಕಲಬುರಗಿಯ ಕರ್ನಾಟಕ ನವನಿರ್ಮಾಣ ಸೇನೆಯ ಕಾರ್ಯಕರ್ತರು ಅಫಜಲಪುರದಲ್ಲಿ ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಬಸ್ ಗಳಿಗೆ ಮಸಿಬಳಿದು, ಭಿತ್ತಿಪತ್ರಗಳನ್ನು ಅಂಟಿಸಿ ಘೋಷಣೆಗಳನ್ನು ಕೂಗಿದ್ದಾರೆ.

ಮಹಾರಾಷ್ಟ್ರ ಗಡಿ ವಿವಾದದ ನ್ಯಾಯಾಲಯದ ಮುಂದೆ ಇರುವಾಗ ಮಹಾರಾಷ್ಟ್ರ ತಕರಾರು ಎತ್ತಿರುವುದು ಖಂಡನೀಯವೆಂದು ಕರ್ನಾಟಕ ನವನಿರ್ಮಾಣ ಸೇನೆಯ  ಜಿಲ್ಲಾಧ್ಯಕ್ಷ ರವೀಂದ್ರ (Rabindra)ಜಮಾದಾರ ಹೇಳಿದ್ದಾರೆ.

Similar News