ಏನೂ ಧರಿಸದೇ ಇದ್ದರೂ ಮಹಿಳೆ ಸುಂದರವಾಗಿ ಕಾಣಿಸುತ್ತಾಳೆ: ವಿವಾದ ಸೃಷ್ಟಿಸಿದ ರಾಮ್‌ದೇವ್‌ ಹೇಳಿಕೆ

Update: 2022-11-26 14:44 GMT

ಥಾಣೆ: ಯೋಗ ಗುರು ಮತ್ತು ಉದ್ಯಮಿ ರಾಮ್‌ದೇವ್ ಅವರು ಮಹಿಳೆಯರ ಉಡುಪುಗಳ ಬಗ್ಗೆ ಪ್ರತಿಕ್ರಿಯಿಸಿದ ಬಳಿಕ ರಾಜಕೀಯ ಮತ್ತು ಸಾಮಾಜಿಕ ವಲಯಗಳಿಂದ ಟೀಕೆಗೆ ಗುರಿಯಾಗಿದ್ದಾರೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು "ಮಹಿಳೆಯರು ಏನನ್ನೂ ಧರಿಸದಿದ್ದರೂ ಸಹ ಸುಂದರವಾಗಿ ಕಾಣುತ್ತಾರೆ" ಎಂದು ಹೇಳಿದ್ದಾರೆ.

ಶುಕ್ರವಾರ ಮಹಾರಾಷ್ಟ್ರದ ಥಾಣೆಯಲ್ಲಿ ಯೋಗ ತರಬೇತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, "ಮಹಿಳೆಯರು ಸೀರೆಯಲ್ಲಿ ಚೆನ್ನಾಗಿ ಕಾಣುತ್ತಾರೆ, ಅವರು ಸಲ್ವಾರ್ ಸೂಟ್‌ಗಳಲ್ಲಿ ಉತ್ತಮವಾಗಿ ಕಾಣುತ್ತಾರೆ ಮತ್ತು ನನ್ನ ದೃಷ್ಟಿಯಲ್ಲಿ ಅವರು ನನ್ನಂತೆ ಏನನ್ನೂ ಧರಿಸದಿದ್ದರೂ ಸಹ ಅವರು ಚೆನ್ನಾಗಿ ಕಾಣುತ್ತಾರೆ" ಎಂದು ಹೇಳಿದರು.

ಈ ಸಮಾವೇಶದಲ್ಲಿ ಹಲವಾರು ಮಹಿಳೆಯರು ರಾಮದೇವ್ ನಡೆಸಿದ ತರಬೇತಿ ಶಿಬಿರದಲ್ಲಿ ಭಾಗವಹಿಸಿದರು. ತರಬೇತಿ ಶಿಬಿರದ ನಂತರ ಸಭೆ ಪ್ರಾರಂಭವಾದಾಗಿನಿಂದ, ಅನೇಕ ಮಹಿಳೆಯರು ಉಡುಪು ಬದಲಿಸಲು ಸಮಯ ಸಿಗದೇ ತಮ್ಮ ಯೋಗ ಧಿರಿಸಿನಲ್ಲೇ ಭಾಗವಹಿಸಿದರು.

ಇದನ್ನು ಗಮನಿಸಿದ ರಾಮ್‌ದೇವ್ ಅವರು ಸೀರೆ ಉಡಲು ಸಮಯ ಸಿಗದಿದ್ದರೆ ಯಾವುದೇ ಸಮಸ್ಯೆ ಇಲ್ಲ ಮತ್ತು ಅವರು ಮನೆಗೆ ಹೋದ ನಂತರ ಸೀರೆ ಉಡಬಹುದು ಎಂದು ಹೇಳಿದರು.

ಥಾಣೆಯ ಬಾಳಾಸಾಹೆಬಂಚಿ ಶಿವಸೇನಾ ಸಂಸದ ಶ್ರೀಕಾಂತ್ ಶಿಂಧೆ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರ, ಇತರ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Similar News