ಉಡುಪಿ: ಕೇಂದ್ರ ಸರಕಾರದ ಸುತ್ತೋಲೆ ಹರಿದು ದಲಿತ ಐಕ್ಯತಾ ಸಮಿತಿ ಆಕ್ರೋಶ

ಸಂವಿಧಾನ ಸಮರ್ಪಣಾ ದಿನಾಚರಣೆ

Update: 2022-11-26 13:45 GMT

ಉಡುಪಿ, ನ.26: ಕರ್ನಾಟಕ ದಲಿತ ಸಂಘಟನೆಗಳ ಐಕ್ಯತಾ ಸಮಿತಿ ಉಡುಪಿ ಜಿಲ್ಲೆ ಇದರ ನೇತೃತ್ವದಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆಯ ಪ್ರಯುಕ್ತ ಶನಿವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಆವರಣದಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

ಅಂಬೇಡ್ಕರ್ ಬರೆದ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ವೇದ, ಉಪನಿಷತ್ತು ಕಾಲದಲ್ಲಿಯೂ ಪ್ರಜಾಪ್ರಭುತ್ವ ಇತ್ತೆಂದು ಕೇಂದ್ರ ಸರಕಾರ ಸುಳ್ಳು ಸುತ್ತೋಲೆ ಹೊರಡಿಸಿರುವುದಾಗಿ ಆರೋಪಿಸಿ ಸಮಿತಿಯ ಮುಖಂಡರು, ಇದೇ ಸಂದರ್ಭದಲ್ಲಿ ಸುತ್ತೋಲೆಯನ್ನು ಹರಿದು ಹಾಕಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಮಿತಿಯ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ್ ಗಿಳಿಯಾರು ಮಾತನಾಡಿ, ಸಂವಿಧಾನದಲ್ಲಿನ ಸಹೋದರತೆ, ಭಾತೃತ್ವದ ಅಂಶವನ್ನು ಬುದ್ಧನ ಬೋಧನೆಯಿಂದ ಹಾಗೂ ಪ್ರಜಾಪ್ರಭುತ್ವ ಪರಿಕಲ್ಪನೆಯನ್ನು ಅಮೆರಿಕಾ, ಇಂಗ್ಲೆಂಡ್, ಐರ್ಲೆಂಡ್ ಸಂವಿಧಾನದಿಂದ ಪಡೆದುಕೊಂಡೆ ಎಂದು ಅಂಬೇಡ್ಕರ್ ಹೇಳಿದ್ದಾರೆ. ಅದೇ ರೀತಿ ಸಂವಿಧಾನದ ಇಡೀ ರಚನಾ ಸಮಿತಿ ಸಭೆಯಲ್ಲೂ ಈ ವೇದ, ಉಪನಿಷತ್ತುಗಳ ಬಗ್ಗೆ ಚರ್ಚೆ ಅಥವಾ ಪ್ರಸ್ತಾಪ ಆಗಿಲ್ಲ. ಸಂವಿಧಾನ ಮಂಡನೆ ಮಾಡುವ ಸಭೆಯಲ್ಲೂ ಈ ವಿಚಾರ ಚರ್ಚೆ ಆಗಿಲ್ಲ ಎಂದರು.

ಕೇಂದ್ರ ಸರಕಾರ ಉದ್ದೇಶ ಪೂರ್ವಕವಾಗಿ ಸಂವಿಧಾನ ರಚನೆಯಲ್ಲಿನ ಅಂಬೇಡ್ಕರ್ ಅವರ ಕೊಡುಗೆ ಹಾಗೂ ಪ್ರಭಾವವನ್ನು ಕಡಿಮೆ ಮಾಡಲು ಹಾಗೂ ಸುಳ್ಳು ಇತಿಹಾಸವನ್ನು ಸೃಷ್ಠಿಸಿ ತಮ್ಮ ಕಾರ್ಯ ಸೂಚಿಯನ್ನು ಮುನ್ನೆಲೆಗೆ ತರಲು ಈ ರೀತಿಯ ಹುನ್ನಾರ ಮಾಡಲಾಗುತ್ತಿದೆ. ದೇಶದ ನೈಜ್ಯ ಇತಿಹಾಸವನ್ನು ತಿರುಚಲು ಪ್ರಜಾಪ್ರಭುತ್ವವಾದಿಗಳಾದ ನಾವು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಅವರು ತಿಳಿಸಿದರು.

ದಲಿತ ಮುಖಂಡ ಜಯನ್ ಮಲ್ಪೆ ಮಾತನಾಡಿ, ಕೇಂದ್ರ ಬಿಜೆಪಿ ಸರಕಾರ ಸಂವಿಧಾನವನ್ನು ನಾಶ ಮಾಡುವ ಸಂಚು ನಡೆಸುತ್ತಿದೆ. ಜನ ವಿರೋಧಿ ನೀತಿಯ ಜೊತೆ ಜನ ಜೀವನದೊಂದಿಗೆ ಚೆಲ್ಲಾಟ ಆಡುತ್ತಿದೆ. ಕ್ರೂರ ಹಾಗೂ ಹೇಯವಾದ ಈ ಸುತ್ತೋಲೆಯನ್ನು ಹೊರಡಿಸಿ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ದಲಿತರ ಮತ್ತು ಇಡೀ ದೇಶದ ಆಶಯಕ್ಕೆ ದಕ್ಕೆ ತರುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಸಂಚಾಲಕರಾದ ಸುಂದರ್ ಮಾಸ್ತರ್, ಶ್ಯಾಮ್‌ರಾಜ್ ಬಿರ್ತಿ, ಹರೀಶ್ ಮಲ್ಪೆ, ವಾಸುದೇವ ಮುದ್ದೂರು, ರಮೇಶ್ ಕೋಟ್ಯಾನ್, ಪರಮೇಶ್ವರ ಉಪ್ಪೂರು, ಶೇಖರ ಹೆಜಮಾಡಿ, ದಯಾನಂದ ಕಪ್ಪೆಟ್ಟು, ಆನಂದ ಬ್ರಹ್ಮಾವರ, ವಿಶ್ವನಾಥ್ ಬೆಳ್ಳಂಪಳ್ಳಿ, ಯುವರಾಜ್, ಗಣೇಶ್ ನೆರ್ಗಿ ಮೊದಲಾದವರು ಉಪಸ್ಥಿತರಿದ್ದರು.

Similar News