ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ದಲಿತರ ಐಕ್ಯತಾ ಸಮಾವೇಶ: ಜಯನ್ ಮಲ್ಪೆ

Update: 2022-11-26 13:49 GMT

ಉಡುಪಿ : ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಡಿ.6 ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ‘ದಲಿತರ ಸಾಂಸ್ಕೃತಿಕ ಪ್ರತಿರೋಧ’ ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶವನ್ನು ಏರ್ಪ ಡಿಸಲಾಗಿದ್ದು, ಇದರಲ್ಲಿ ಉಡುಪಿ ಜಿಲ್ಲೆಯಿಂದ ಸುಮಾರು ಮೂರು ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಉಡುಪಿ ಜಿಲ್ಲಾ ದಲಿತ ಸಂಘಟನೆ ಗಳ ಐಕ್ಯತಾ ಸಮಿತಿಯ ಸಂಚಾಲಕ ಜಯನ್ ಮಲ್ಪೆ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಮರೆಯಾಗಿ ಕೋಮು ವಿಷದ ಗೋಡ್ಸೆ, ಸಾವರ್ಕರ್ ಮುನ್ನಡೆ ಬರುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಚದುರಿ ಹೋಗಿರುವ ದಲಿತ ಸಂಘಟನೆಗಳನ್ನು ಒಗ್ಗೂಡಿಸಿ ಸಮಾವೇಶ ಆಯೋಜಿಸಲಾಗಿದೆ. ಸಮಾನ ಮನಸ್ಕ ಹನ್ನೆರಡು ಸಂಘಟನೆಗಳು ಐಕ್ಯ ಹೋರಾಟಕ್ಕೆ ತೀರ್ಮಾಸಿದ್ದು, ಉಡುಪಿ ಜಿಲ್ಲೆಯಲ್ಲೂ ಬಹುತೇಕ ಎಲ್ಲಾ ದಲಿತ ಸಂಘಟನೆಗಳು ಒಂದಾಗಿ ಈ ಸಮಾವೇಶದಲ್ಲಿ ಭಾಗವಹಿಸಲು ತೀರ್ಮಾನಿಸಿದೆ ಎಂದರು.

ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರ ಆಡಳಿತದಲ್ಲಿ ಜನವಿರೋಧಿ ಕಾಯ್ದೆ ಮತ್ತು ನೀತಿಗಳನ್ನು ಜಾರಿಗೊಳಿಸಿ, ಪ್ರಜಾಪ್ರಭುತ್ವ ಸಂವಿಧಾನ ಒಕ್ಕೂಟ ವ್ಯವಸ್ಥೆಯ ಆಶಯಗಳನ್ನು ನುಚ್ಚುನೂರು ಮಾಡಲಾಗಿದೆ ಎಂದ ಅವರು,  ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಸಾಮಾಜಿಕ ನ್ಯಾಯ ಮೀಸಲಾತಿ ಆಶಯಗಳಿಗೆ ಆರ್‌ಎಸ್‌ಎಸ್, ಬಿಜೆಪಿ ಮತ್ತು ಸಂಘಪರಿವಾರ ಅಡ್ಡಿಯುಂಟು ಮಾಡುತ್ತಿದ್ದು, ತಳ ಸಮುದಾಯವನ್ನು ಧರ್ಮದ ಹೆಸರಿನಲ್ಲಿ ಒಡೆಯಲಾಗುತ್ತಿದೆ ಎಂದು ಆರೋಪಿಸಿದರು.

ಐಕ್ಯತಾ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು ಮಾತನಾಡಿ, ಈವರೆಗೆ ಜಿಲ್ಲೆಯಲ್ಲಿ ದಲಿತ ಸಂಘಟನೆಗಳು ಸೈದ್ಧಾಂತಿಕ ಭಿನ್ನಾಭಿಪ್ರಾಯ ಇಟ್ಟು ಕೊಂಡು ಬೇರೆ ಬೇರೆಯಾಗಿ ಅಂಬೇಡ್ಕರ್ ವಿಚಾರಧಾರೆ ಜನರಿಗೆ ತಲುಪಿಸುವ ಹಾಗೂ ಸರಕಾರ ನೀತಿಗಳ ವಿರುದ್ಧ ಚಳವಳಿ ರೂಪಿಸುವ ಕೆಲಸ ಮಾಡಿಕೊಂಡು ಬಂದಿವೆ. ಆದರೆ ಇದು ಇಡೀ ದೇಶದಲ್ಲಿ ವಿಷಮ ಪರಿಸ್ಥಿತಿ ಇದೆ. ದೇಶದ ಇತಿಹಾಸವನ್ನು ತಿರುಚಿ ಅವರಿಗೆ ಬೇಕಾದ ರೀತಿಯಲ್ಲಿ ಬರೆಯುವ ಸಿದ್ಧತೆಯಲ್ಲಿ ಕೇಂದ್ರ ಸರಕಾರ ಇದೆ. ಈ ವಿಚಾರದಲ್ಲಿ ನಾವು ಎಚ್ಚೇತ್ತುಕೊಳ್ಳದಿದ್ದರೆ ಮುಂದಿನ ತಲೆಮಾರಿಗೆ ತಪ್ಪು ಸಂದೇಶ ನೀಡಬೇಕಾಗುತ್ತದೆ. ಅದಕ್ಕಾಗಿ ಜಿಲ್ಲೆಯ ಆರು ದಸಂಸ ಬಣಗಳು ಒಂದಾಗಿ ಒಕ್ಕೂಟವನ್ನು ರಚಿಸಿ ಕ್ರಿಯಾಶೀಲವಾಗಿ ಹೋರಾಟ ನಡೆಸಲು ನಿರ್ಣಯ ಮಾಡಿದ್ದೇವೆ ಎಂದರು.

ಜಿಲ್ಲೆಯ ಕೇವಲ ಮೂರು ದಲಿತ ಸಂಘಟನೆಗಳು ತಾಂತ್ರಿಕ ಸಮಸ್ಯೆಯಿಂದ ನಮ್ಮೊಂದಿಗೆ ಸೇರಿಕೊಂಡಿಲ್ಲ. ಮುಂದೆ ಡಿ.6ರ ನಂತರ ಈ ಎಲ್ಲ ದಸಂಸ ಸಂಘಟನೆಗಳು ಸೇರಿಕೊಂಡು ಚಳವಳಿಯನ್ನು ಮತ್ತೆ ಕ್ರಿಯಾಶೀಲವಾಗಿ ಮುನ್ನಡೆಸಲು ನಾವೆಲ್ಲ ಕಂಕಣಬದ್ಧರಾಗಿದ್ದೇವೆ. ಐಕ್ಯತಾ ಒಕ್ಕೂಟದ ಮೂಲಕ ಡಿಸಿ ಮನ್ನಾ ಭೂಮಿ ಚಳವಳಿಯನ್ನು ಮತ್ತೆ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.  

ಸಮಿತಿಯ ಸಂಚಾಲಕರಾದ ಸುಂದರ್ ಮಾಸ್ತರ್, ಶ್ಯಾಮ್‌ರಾಜ್ ಬಿರ್ತಿ, ಶೇಖರ ಹೆಜಮಾಡಿ ಮಾತನಾಡಿದರು. ಸುದ್ಧಿಗೋಷ್ಟಿಯಲ್ಲಿ ಹರೀಶ್ ಸಾಲ್ಯಾನ್, ಪರಮೇಶ್ವರ ಉಪ್ಪೂರು, ರಮೇಶ್ ಕೆಳಾರ್ಕಳಬೆಟ್ಟು, ವಿಶ್ವನಾಥ ಬೆಳ್ಳಂಪಳ್ಳ, ವಾಸುದೇವ ಮುದ್ದೂರು, ರಾಜುಬೆಟ್ಟಿನಮನೆ, ಭಗವಾನ್ ಮಲ್ಪೆ, ಯುವರಾಜ್, ಮುಂತಾದವರು ಉಪಸ್ಥಿತರಿದ್ದರು. 

Similar News