ಮೊದಲ ಹಾಕಿ ಟೆಸ್ಟ್: ಆಸ್ಟ್ರೇಲಿಯ ಕ್ಕೆ ಶರಣಾದ ಭಾರತ

Update: 2022-11-26 17:46 GMT

 ಅಡಿಲೇಡ್, ನ.26: ಭಾರತ ಹಾಕಿ ತಂಡ ಆಸ್ಟ್ರೇಲಿಯ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು 4-5 ಅಂತರದಿಂದ ಸೋತಿದೆ. ಕೊನೆಯ ಕ್ಷಣದಲ್ಲಿ ಎರಡು ಗೋಲುಗಳನ್ನು ಬಿಟ್ಟುಕೊಟ್ಟ ಭಾರತ ಸೋಲಿನ ಕಹಿ ಉಂಡಿದೆ. ಈ ಸೋಲಿನೊಂದಿಗೆ ಆಕಾಶ್‌ದೀಪ್ ಸಿಂಗ್ ಅವರ ಹ್ಯಾಟ್ರಿಕ್ ಗೋಲು ವ್ಯರ್ಥವಾಗಿದೆ.

ಶನಿವಾರ ನಡೆದ ಪಂದ್ಯದಲ್ಲಿ ಆಕಾಶ್‌ದೀಪ್ ಸಿಂಗ್ 10ನೇ, 27ನೇ ಹಾಗೂ 59ನೇ ನಿಮಿಷದಲ್ಲಿ ಗೋಲು ಗಳಿಸಿದರು. ನಾಯಕ ಹರ್ಮನ್‌ಪ್ರೀತ್ ಸಿಂಗ್ 31ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನ್ನು ಗೋಲಾಗಿ ಪರಿವರ್ತಿಸಿದರು.

ಆಸ್ಟ್ರೇಲಿಯದ ಪರ ಲಚ್ಲನ್ ಶಾರ್ಪ್(5ನೇ ನಿಮಿಷ), ನಥಾನ್ ಎಫ್ರಮಸ್(21ನೇ ನಿಮಿಷ), ಟಾಮ್ ಕ್ರೆಗ್(41ನೇ ನಿಮಿಷ) ತಲಾ ಒಂದು ಹಾಗೂ ಬ್ಲೇಕ್ ಗೋವರ್ಸ್(57ನೇ, 60ನೇ ನಿಮಿಷ) ಅವಳಿ ಗೋಲು ಗಳಿಸಿದರು. ಆಸ್ಟ್ರೇಲಿಯ ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದು, 5ನೇ ನಿಮಿಷದಲ್ಲಿ ಭಾರತದ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್‌ರನ್ನು ವಂಚಿಸಿದ ಶಾರ್ಪ್ ಅವರು ಮೊದಲ ಗೋಲು ಗಳಿಸಿದರು. 10ನೇ ನಿಮಿಷದಲ್ಲಿ ಗೋಲು ಗಳಿಸಿದ ಆಕಾಶ್‌ದೀಪ್ ಸಿಂಗ್ ಸ್ಕೋರನ್ನು ಸಮಬಲಗೊಳಿಸಿದರು. 21ನೇ ನಿಮಿಷದಲ್ಲಿ ಗೋಲು ದಾಖಲಿಸಿದ ನಥಾನ್ ಆಸ್ಟ್ರೇಲಿಯಕ್ಕೆ ಮುನ್ನಡೆ ಒದಗಿಸಿಕೊಟ್ಟರು. 27ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿದ ಆಕಾಶ್‌ದೀಪ್ ಸ್ಕೋರನ್ನು 2-2ರಿಂದ ಸಮಬಲಗೊಳಿಸಿದರು.

 ಹರ್ಮನ್‌ಪ್ರೀತ್ ಸಿಂಗ್ 31ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಲ್ಲಿ ಭಾರತಕ್ಕೆ ಮುನ್ನಡೆ ಒದಗಿಸಿಕೊಟ್ಟರು. ಆ ನಂತರ ಭಾರತವು ಬೆನ್ನುಬೆನ್ನಿಗೆ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿದ್ದು, ಎರಡು ಅವಕಾಶವನ್ನು ವ್ಯರ್ಥಗೊಳಿಸಿತು. 41ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಲ್ಲಿ ಕ್ರೆಗ್ ಆಸ್ಟ್ರೇಲಿಯದ ಪರ ಗೋಲು ಗಳಿಸಿದರು. ಆತಿಥೇಯ ತಂಡ ಹಲವು ಪೆನಾಲ್ಟಿ ಕಾರ್ನರ್ ಅವಕಾಶ ಪಡೆದರೂ ಅದನ್ನು ಅವಕಾಶವಾಗಿ ಪರಿವರ್ತಿಸುವಲ್ಲಿ ವಿಫಲವಾಯಿತು.

 ಜರ್ಮನ್‌ಪ್ರೀತ್ ಸಿಂಗ್ ಕೊನೆಯ ಕ್ಷಣದಲ್ಲಿ ಅನಗತ್ಯವಾಗಿ ಗ್ರೀನ್ ಕಾರ್ಡ್ ಪಡೆದರು. ಈ ಪರಿಸ್ಥಿತಿಯ ಸಂಪೂರ್ಣ ಲಾಭ ಪಡೆದ ಆಸ್ಟ್ರೇಲಿಯವು ಮತ್ತೊಂದು ಪೆನಾಲ್ಟಿ ಕಾರ್ನರ್ ಪಡೆಯಿತು. 57ನೇ ನಿಮಿಷದಲ್ಲಿ ಗೋವರ್ಸ್ ಗೋಲು ಗಳಿಸಿದರು. ಆಕಾಶ್‌ದೀಪ್ ಸಿಂಗ್ 59ನೇ ನಿಮಿಷದಲ್ಲಿ ಗೋಲು ಗಳಿಸಿ 4-4ರಿಂದ ಸಮಬಲಗೊಳಿಸಿದರು. ಆಸ್ಟ್ರೇಲಿಯ ಇನ್ನೆರಡು ಪೆನಾಲ್ಟಿ ಅವಕಾಶ ಪಡೆದಿದ್ದು, ಗೋವರ್ಸ್ 60ನೇ ನಿಮಿಷದಲ್ಲಿ ಗೋಲು ಗಳಿಸಿ ಆತಿಥೇಯ ತಂಡಕ್ಕೆ 5-4 ರೋಚಕ ಜಯ ತಂದರು. ಈ ಮೂಲಕ ಆತಿಥೇಯ ತಂಡ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು.

Similar News