ರೋಟರಿ ಕ್ಲಬ್‌ನ ವಾರ್ಷಿಕ ಚಿಣ್ಣರ ಉತ್ಸವ

Update: 2022-11-27 12:59 GMT

ಮಂಗಳೂರು, ನ.27: ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರ್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಜಂಟಿ ಆಶ್ರಯದಲ್ಲಿ ರೋಟರಿ 22ನೇ ವಾರ್ಷಿಕ ಅಂತರ ಮಕ್ಕಳ ರಕ್ಷಣಾ ಮತ್ತು ಆರೈಕೆ ಕೇಂದ್ರದ ಚಿಣ್ಣರ ಉತ್ಸವವು ರವಿವಾರ ನಗರದ ಕೆನರಾ ಹೈಸ್ಕೂಲ್ ಉರ್ವ ಪ್ರಾಂಗಣದಲ್ಲಿ ನಡೆಯಿತು.

ನಗರದ ಸುತ್ತಮುತ್ತಲಿನಲ್ಲಿರುವ ಮಕ್ಕಳ ರಕ್ಷಣೆ ಮತ್ತು ಆರೈಕೆಯ 10 ಕೇಂದ್ರಗಳ ಸುಮಾರು 400 ಮಕ್ಕಳು ಸಂತಸ, ಸಂಭ್ರಮದಿಂದ ಕ್ರೀಡೆಯಲ್ಲಿ ಪಾಲ್ಗೊಂಡರು. ಪೋಷಕರ ಪ್ರೀತಿ, ವಾತ್ಸಲ್ಯದಿಂದ ವಂಚಿತರಾದ ಮುಗ್ಧ ಮಕ್ಕಳು ಇತರ ಕೇಂದ್ರದ ಮಕ್ಕಳ ಜೊತೆಗೆ ಬೆರೆತು, ಮುಕ್ತವಾಗಿ ತಮ್ಮ ವ್ಯಥೆ, ಕಷ್ಟ, ಚಿಂತೆ, ವೇದನೆಯನ್ನು ಮರೆತು ಹುರುಪು ಹಾಗೂ ಉತ್ಸಾಹದಿಂದ ನಕ್ಕು ಕುಣಿದಾಡಿದರು. ಆಕರ್ಷಕ ಪಥ ಸಂಚಲನ ನಡೆಸಿದ ಬಳಿಕ ಸ್ಫೂರ್ತಿ ಮತ್ತು ಉತ್ಸಾಹದಿಂದ ತಮ್ಮಲ್ಲಿ ಹುದುಗಿದ ಕ್ರೀಡಾ ಸಾಮರ್ಥ್ಯ ಮತ್ತು ಕಲಾಪ್ರತಿಭೆಯನ್ನು ಪ್ರದರ್ಶಿಸಿ ಸಭಿಕರನ್ನು ರಂಜಿಸಿದರು.

ಮಂಗಳೂರು ವಿವಿಯ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ಸ್ಫರ್ಧಾಕೂಟವನ್ನು ಉದ್ಘಾಟಿಸಿ ಮಾತನಾಡಿ ದರು. ಸಂಘಟನಾ ಅಧ್ಯಕ್ಷ ರೋ.ಡಾ. ದೇವದಾಸ್ ರೈ ಮಾತನಾಡಿದರು.

ವೇದಿಕೆಯಲ್ಲಿ ಜಿಲ್ಲಾ ರೋಟರಿ ವಲಯ 2 ಸಹಾಯಕ ಗವರ್ನರ್ ರಾಜ್‌ಗೋಪಾಲ್ ರೈ, ರೋಟರಿ ಸಂಸ್ಥೆಯ ನಿಯೋಜಿತ ಅಧ್ಯಕ್ಷ  ರಾಜೇಶ್ ಶೆಟ್ಟಿ, ರೋಟರ್ಯಾಕ್ಟ್ ಸಂಸ್ಥೆಯ ಅಧ್ಯಕ್ಷ ಅರ್ಜುನ್ ಪ್ರಕಾಶ್, ಕಾರ್ಯದರ್ಶಿ ಅವಿನಾಶ್ ಉಪಸ್ಥಿತರಿದ್ದರು.

ರೋಟರಿ ಅಧ್ಯಕ್ಷ ಸಾಯಿಬಾಬಾ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಪ್ರದೀಪ್ ಕುಲಾಲ್ ವಂದಿಸಿದರು. ಶ್ರಾವ್ಯಾ ಕಾರ್ಯಕ್ರಮ ನಿರೂಪಿಸಿದರು.

ಸಮಾರೋಪ ಸಮಾರಂಭದಲ್ಲಿ ರೋಟರಿ ಜಿಲ್ಲಾ ನಿಯೋಜಿತ ಗವರ್ನರ್ ವಿಕ್ರಮ್ ದತ್ತ ಅತಿಥಿಯಾಗಿ ಪಾಲ್ಗೊಂಡು ವಿಜೇತರಿಗೆ ಬಹುಮಾನ ವಿತರಿಸಿದರು.

Similar News