ಇರಾನ್ ನ ಮಾಜಿ ಫುಟ್ಬಾಲ್ ಆಟಗಾರ ಗಫೂರಿಗೆ ಜಾಮೀನು ಬಿಡುಗಡೆ

Update: 2022-11-27 18:42 GMT

ಪ್ಯಾರಿಸ್,ನ.27: ಇರಾನ್ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆಯನ್ನು ಬೆಂಬಲಿಸಿದ್ದಕ್ಕಾಗಿ ಬಂಧಿತರಾದ ಮಾಜಿ ಅಂತಾರಾಷ್ಟ್ರೀಯ ಫುಟ್ಬಾಲ್ ಆಟಗಾರ ವೊರಿಯಾ ಗಫೂರಿ ಹಾಗೂ ಪ್ರಮುಖ ಭಿನ್ನಮತೀಯ ನಾಯಕ ಹೊಸೈನ್ ರೊನಾಗಿ ಅವರನ್ನು ಇರಾನ್ ನ ಅಧಿಕಾರಿಗಳು ಶನಿವಾರ ಜಾಮೀನಿನಲ್ಲಿ ಬಿಡುಗಡೆಗೊಳಿಸಿದ್ದಾರೆ.

ಖುರ್ದಿಶ್ ಜನಾಂಗೀಯರಾದ ಫುಟ್ಬಾಲ್ ಆಟಗಾರ ಗಫೂರಿ ಅವರು ಇರಾನ್ನಾದ್ಯಂತ ನಡೆಯುತ್ತಿರುವ ಸರಕಾರಿ ವಿರೋಧಿ ಪ್ರತಿಭಟನೆಯನ್ನು ಬಹಿರಂಗವಾಗಿ ಬೆಂಬಲಿಸಿದ್ದರು. ಇರಾನ್ನ ಭಿನ್ನಮತೀಯ ನಾಯಕ ರೊನಾಗಿ ಅವರನ್ನು ಸೆಪ್ಟೆಂಬರ್ ತಿಂಗಳ ಮಧ್ಯದಲ್ಲಿ ಪ್ರತಿಭಟನೆ ಭುಗಿಲೆದ್ದ ಕೆಲವೇ ದಿನಗಳ ಬಳಿಕ ಬಂಧಿಸಲಾಗಿತ್ತು. ಕಳೆದ ಎರಡು ತಿಂಗಳುಗಳಿಂದ ಜೈಲಿನಲ್ಲಿ ನಿರಶನ ನಡೆಸುತ್ತಿದ ರೊನಗಿ ಅವರ ದೇಹಸ್ಥಿತಿ ಹದಗೆಟ್ಟಿದ್ದುದು ತೀವ್ರ ಆತಂಕಕ್ಕೆ ಕಾರಣವಾಗಿತ್ತು.

 ವೊರಿಯಾ ಗಫೂರಿ ಹಾಗೂ ಹೊಸೈನ್ ರೊನಾಗಿ ಅವರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆಯೆಂದು, ಇರಾನ್ನ ಸರಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ‘ಫಾರ್ಸ್ ನ್ಯೂಸ್’ ಏಜೆನ್ಸಿ ವರದಿ ಮಾಡಿದೆ. ಹೊಸೈನ್ ಅವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಜಾಮೀನು ದೊರೆತಿದೆಯೆಂದು ಹೊಸೈನ್ ರೊನಾಗಿ ಅವರ ಸಹೋದರ ಹಸ್ಸನ್ ಟ್ವೀಟ್ ಮಾಡಿದ್ದಾರೆ.

37 ವರ್ಷ ವಯಸ್ಸಿನ ರೊನಾಗಿ ಅವರು ವಾಲ್ಸ್ಟ್ರೀಟ್ ಜರ್ನಲ್ ಪತ್ರಿಕೆಗೆ ಅಂಕಣಕಾರರಾಗಿ ಬರೆಯುತ್ತಿದ್ದರು. ಹಾಲಿ ಇರಾನ್ ಆಡಳಿತದ ವಿರುದ್ಧ ನಿರ್ಭಿತವಾಗಿ ಟೀಕೆಗಳನ್ನು ಮಾಡಿದ್ದಕ್ಕಾಗಿ ಅವರನ್ನು ಬಂಧಿಸಲಾಗಿತ್ತು. ಸೆಪ್ಟೆಂಬರ್ 24ರಂದು ಬಂಧಿತರಾದ ರೊನಾಗಿ ಅವರ ಮೂತ್ರಪಿಂಡಹಾನಿಗೀಡಾಗಿರುವುದರಿಂದ ಅವರ ಪ್ರಾಣಕ್ಕೆ ಅಪಾಯವಿದೆಯೆಂದು ಕುಟುಂಬಿಕರು ತಿಳಿಸಿದ್ದರು.

Similar News