ಪರ್ಕಳ: ಅರ್ಧದಲ್ಲೇ ನಿಂತ ನೂತನ ಕಾಂಕ್ರಿಟ್ ರಸ್ತೆ ಕಾಮಗಾರಿ!

ನಿತ್ಯ ಸಂಚರಿಸುವ ರಸ್ತೆ ಬಳಕೆದಾರರಿಗೆ ಬಗೆಹರಿಯದ ಸಮಸ್ಯೆ

Update: 2022-11-28 13:30 GMT

ಉಡುಪಿ, ನ.28: ಪರ್ಕಳದ ರಸ್ತೆಯೊಂದರ ಅಗಲೀಕರಣ ಕಾಮಗಾರಿ ನಿರೀಕ್ಷೆಯಂತೆ ಸಾಗದೇ, ಅರ್ಧದಲ್ಲೇ ನಿಂತು ವಾಹನ ಚಾಲಕರು ಹಾಗೂ ಪಾದಚಾರಿಗಳು ಸೇರಿದಂತೆ ರಸ್ತೆಯ ಬಳಕೆದಾರರೆಲ್ಲರೂ ಪ್ರತಿನಿತ್ಯ ವೆಂಬಂತೆ  ಸಂಬಂಧಿತರಿಗೆ ಹಿಡಿಶಾಪ ಹಾಕುವಂತಾಗಿದೆ. ಏಕೆಂದರೆ ರಸ್ತೆಗೆ ಹಾಕಿದ ಜಲ್ಲಿಕಲ್ಲು ಎಲ್ಲರಿಗೂ ಸಮಸ್ಯೆಯನ್ನುಂಟು ಮಾಡುತ್ತಿದೆ.

ಅರ್ಜುನ ಯುವಕ ಮಂಡಲದ ಪಕ್ಕದಲ್ಲಿ ಸಾಗುವ ರಸ್ತೆಯು ಮುಂದೆ ಸಾಗಿ ಸರಳೆಬೆಟ್ಟು ಜಂಕ್ಷನ್‌ಗೆ ಸಂಪರ್ಕ ಕಲ್ಪಿಸುವ ಹಳೆಯ ರಸ್ತೆಯನ್ನು ಅಗಲೀಕರಿಸಿ ಕಾಂಕ್ರಿಟೀಕರಣಗೊಳಿಸುವ ಕಾಮಗಾರಿ ಕಳೆದ ಮಳೆಗಾಲದಲ್ಲಿ ಪ್ರಾರಂಭ ಗೊಂಡಿತ್ತು. ನಗರೋತ್ಥಾನದ ಹಾಗೂ ಇತರ ಅನುದಾನದಿಂದ ಈ ಕಾಮಗಾರಿಗಾಗಿ ಬೃಹತ್ ಮೊತ್ತವನ್ನು ಬಿಡುಗಡೆಗೊಳಿಸಲಾಗಿತ್ತು.

ಆದರೆ ಕಳೆದ ಎಂಟು ತಿಂಗಳಿಂದ ಈ ರಸ್ತೆ ಕಾಮಗಾರಿ ಕುಂಟುತ್ತಾ ಸಾಗಿದೆ. ಮಳೆಗಾಲಕ್ಕೆ ಮೊದಲೇ ಇದ್ದ ಡಾಂಬರ್ ರಸ್ತೆ ತೆಗೆದಿದ್ದು, ಮಳೆಗಾಲದಲ್ಲಿ ಇದು ಕೆಸರು ಗದ್ದೆಯಂತಾಗಿ ನಡೆದಾಡಲು ಅಸಾಧ್ಯವೆನಿಸಿದಾಗ ಸ್ಥಳೀಯರು ಪ್ರತಿಭಟಿಸಿದ್ದರು. ಇದೀಗ ಮಳೆಗಾಲ ಮುಗಿದು ಚಳಿಗಾಲ ಮುಕ್ತಾಯ ಹಂತದಲ್ಲಿದ್ದರೂ ಕಾಮಗಾರಿ ಪ್ರಾರಂಭಗೊಳ್ಳುವ ಯಾವುದೇ ಸೂಚನೆ ಕಾಣಿಸುತ್ತಿಲ್ಲ.

ರಾಮ ಮಂದಿರದ ಬಳಿ ರಸ್ತೆಯ ಎರಡು ಬದಿಯನ್ನು ಒಂದೇ ರೀತಿ ಅಗಲೀಕರಿಸದೆ ಇರುವುದು  ಕಾಮಗಾರಿ ನಡೆಸಲು ತೊಂದರೆಯಾಗುತ್ತಿದೆ ಎಂದು ತಿಳಿದುಬಂದಿದೆ.  ಅಲ್ಲದೇ ಅಗಲೀಕರಣದ ವಿಷಯದಲ್ಲಿ ಭಿನ್ನಾಭಿಪ್ರಾಯ ತಲೆದೋರಿದ್ದು, ವಿವಾದ ಈಗ ನ್ಯಾಯಾಲಯದ ಮೆಟ್ಟಲೇರಿದೆ. ಇದರಿಂದ ಕಾಮಗಾರಿಯನ್ನು ಪೂರ್ಣಗೊಳಿಸಲು ಆಗದೆ ಹಿನ್ನಡೆಯಾಗಿದೆ.

ಇದರಿಂದ ದಿನನಿತ್ಯ ಸಂಚರಿಸುವ ಪ್ರಯಾಣಿಕರಿಗೆ ಹಾಗೂ ವಾಹನಗಳಿಗೆ ಅಗೆದ ಹಳೆಜಲ್ಲಿಯ ರಸ್ತೆಯಲ್ಲಿಯೇ ಸಂಚರಿಸಬೇಕಾದ ಸ್ಥಿತಿ ಉದ್ಭವಿಸಿದೆ. ಆದ್ದರಿಂದ ನಗರಸಭೆ, ಆಡಳಿತ ಪಕ್ಷದ ನಾಯಕರು, ನಗರಸಭೆಯ ಸದಸ್ಯರು ಇತ್ತಕಡೆ ಗಮನಿಸಿ ಸಮಸ್ಯೆಗೆ ಕೂಡಲೇ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Similar News