‘ಗಾಂಧೀಜಿಯನ್ನು ಎತ್ತರದಲ್ಲಿರಿಸದೇ ಮಕ್ಕಳ ಮಧ್ಯೆ ತರುವ ಪ್ರಯತ್ನ’

ಗುಜ್ಜಾರ್‌ರ ‘ಮಕ್ಕಳಿಗಾಗಿ ಗಾಂಧಿ’ ಬಿಡುಗಡೆಗೊಳಿಸಿ ಮಮತಾ ರೈ

Update: 2022-11-28 14:55 GMT

ಮಣಿಪಾಲ : ಗಾಂಧೀಜಿಯನ್ನು ಎತ್ತರದಲ್ಲಿರಿಸಿ ಆರಾಧನೆಗೆ ಸೀಮಿತ ಗೊಳಿಸದೇ ಮಕ್ಕಳ ಮಧ್ಯೆ ತರುವ ಪ್ರಯತ್ನವನ್ನು ‘ಮಕ್ಕಳಿಗಾಗಿ ಗಾಂಧಿ’ ಕೃತಿಯ ಮೂಲಕ ಮಾಡಲಾಗಿದೆ ಎಂದು ಪರಿಸರವಾದಿ ಹಾಗೂ ಕಾರ್ಕಳದ ಕದಿಕೆ ಟ್ರಸ್ಟ್‌ನ ಅಧ್ಯಕ್ಷೆ ಮಮತಾ ರೈ ಹೇಳಿದ್ದಾರೆ.

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಹಾಗೂ ಬಹುಲಿಪಿ (ಬಹುರೂಪಿ ಮತ್ತು ವಿವಿಡ್‌ಲಿಪಿ) ಜಂಟಿಯಾಗಿ ಮಣಿಪಾಲದಲ್ಲಿರುವ ತಾರಾಲಯದ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ ನಾಡಿನ ಪ್ರಸಿದ್ಧ ಕಲಾವಿದ ಗುಜ್ಜಾರ್ (ಬಿ.ಜಿ.ಗುಜ್ಜಾರಪ್ಪ) ಅವರು ಚಿತ್ರಿಸಿರುವ ಎರಡು ಪುಸ್ತಕಗಳನ್ನು- ಮಕ್ಕಳಿಗಾಗಿ ಗಾಂಧೀಜಿ (ಕನ್ನಡ) ಮತ್ತು ಗಾಂಧಿ ಇಲ್ಲಸ್ಟ್ರೇಟೆಡ್ ಫಾರ್ ಕಿಡ್ಸ್ (ಇಂಗ್ಲಿಷ್)- ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.

ಗಾಂಧಿ ಚಿಂತನೆಯ ಮೂಲಕ ಉಳಿಸಿಹೋದ ಹೆಜ್ಜೆಗುರುತುಗಳನ್ನು ಈ ಕೃತಿಗಳ ಮೂಲಕ ಗುಜ್ಜಾರ್ ಮೂಡಿಸಿ ದ್ದಾರೆ. ೨೧ನೇ ಶತಮಾನದಲ್ಲೂ ನಾಗರಿಕ ಜಗತ್ತು ಯುದ್ಧಕ್ಕೆ ಮುಂದಾಗುತ್ತದೆ ಎಂಬುದನ್ನು ಯಾರು ಅರಿತಿದ್ದರು ಎಂದ ಮಮತಾ, ಇಂಥ ಸಮಯದಲ್ಲಿ ಗಾಂಧಿ ನಮಗೆ ಹೆಚ್ಚು ಪ್ರಸ್ತುತರಾಗುತ್ತಾರೆ. ಹೀಗಾಗಿ ಈ ಪುಸ್ತಕಗಳು ಹೆಚ್ಚು ಹೆಚ್ಚು ಮಕ್ಕಳನ್ನು ತಲುಪುವಂತಾಗಬೇಕು  ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಪತ್ರಕರ್ತ, ಬಹುರೂಪಿಯ ಜಿ. ಎನ್. ಮೋಹನ್, ಗಾಂಧೀಜಿಯ ನೆನಪುಗಳನ್ನು ಅಳಿಸಿಹಾಕುವ ತೀವ್ರ ಪ್ರಯತ್ನ ನಡೆಯುತ್ತಿರುವ ಈ ಸಂದರ್ಭದಲ್ಲಿ ಗಾಂಧಿಯ ಚಿಂತನೆಗಳು ಏನು ಎಂಬುದನ್ನು  ವಿವರಿಸುವ ಹಾಗೂ ಅವುಗಳನ್ನು ಮಕ್ಕಳಿಗೆ ತಲುಪಿಸುವ ಉದ್ದೇಶದಿಂದ  ಉದ್ದೇಶದಿಂದ ಈ ಕೃತಿಯನ್ನು ಹೊರತರಲಾಗಿದೆ ಎಂದರು.

ಕೃತಿಯ ಮೂಲಕ ಗಾಂಧಿಯನ್ನು ಕಟ್ಟಿಕೊಡುವ ಪ್ರಯತ್ನವನ್ನು ಕಲಾವಿದ ಗುಜ್ಜಾರ್, ಗಾಂಧೀಯದೇ ಆದ ಚಿಂತನೆ (ಕೊಟೇಶನ್)ಗಳ ಮೂಲಕ ನಡೆಸಿದ್ದಾರೆ. ಗಾಂಧಿ ನೆನಪನ್ನು ಅಳಿಸುವ ಪ್ರಯತ್ನದ ನಡುವೆ ಇಂದು ವಿಶ್ವದಾದ್ಯಂತ ಗಾಂಧಿ ಸದ್ದಿಲ್ಲದೇ ಆವರಿಸಿಕೊಂಡಿದ್ದಾರೆ ಎಂದ ಮೋಹನ್,  ಗಾಂಧಿ ತನ್ನ ಆಲೋಚನೆ, ಯೋಚನೆಗಳ ಮೂಲಕ ಮತ್ತೆ ಮತ್ತೆ ಪುಟಿದೇಳುತಿದ್ದಾರೆ ಎಂದರು.

ಕೃತಿಕಾರ ಹಾಗೂ ಕಲಾವಿದ ಗುಜ್ಜಾರ್ ಮಾತನಾಡಿ, ಗಾಂಧಿಯ ಚಿಂತನೆಗಳನ್ನು ಸಂಗ್ರಹಿಸುವ ಅಭ್ಯಾಸ ತನಗೆ ಮೊದಲಿನಿಂದಲೂ ಇತ್ತು. ಇವುಗಳು ಗಾಂಧಿಯದೇ ಚಿಂತನೆ ಎಂಬುದನ್ನು ಖಚಿತಪಡಿಸಿಕೊಂಡು, ಇವುಗಳಲ್ಲಿ ಮಕ್ಕಳಿಗೆ ಅರ್ಥವಾಗುವ ಚಿಂತನೆಗಳನ್ನು ಆಯ್ಕೆ ಮಾಡಿಕೊಂಡುಚಿತ್ರದೊಂದಿಗೆ ಮಕ್ಕಳಿಗೆ ತಲುಪಿಸುವ ಪ್ರಯತ್ನ ಮಾಡಿದ್ದೇನೆ. ಇದರಿಂದ ಮುಂದಿನ ಪೀಳಿಗೆಗೂ ಗಾಂಧಿ ತಲುಪಲಿ ಎಂಬುದು ತನ್ನ ಉದ್ದೇಶವಾಗಿದೆ ಎಂದರು. 

ಹಿರಿಯ ಪತ್ರಕರ್ತ ರಾಜಾರಾಮ್ ತಲ್ಲೂರು, ಹಿರಿಯ ಕಲಾವಿದ ರಾ.ಸೂರಿ, ವಿವಿಡ್‌ಲಿಪಿಯ ನಾಗರಾಜ ಜಂಬಾ ಉಪಸ್ಥಿತರಿದ್ದರು. ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಶ್ರಾವ್ಯ ಬಾಸ್ರಿ ವೈಷ್ಣವ ಜನತೋ ಹಾಡಿದರೆ, ಸಂಸ್ಥೆಯ ವಿದ್ಯಾರ್ಥಿಗಳಾದ ಅಪರ್ಣಾ ಪರಮೇಶ್ವರ್ ಸ್ವಾಗತಿಸಿದರು. ಗೌತಮಿ ಕಾಕತ್ಕರ್ ಕಾರ್ಯಕ್ರಮ ನಿರೂಪಿಸಿದ್ದು, ಅಭಿನಯ ವಂದಿಸಿದರು.

ಬಳಿಕ ಗುಜ್ಜಾರ್ ಕಾರ್ಟೂನ್ ಕುರಿತು ಪ್ರಾತ್ಯಕ್ಷಿಕೆ ನಡೆಸಿಕೊಟ್ಟು, ವ್ಯಂಗ್ಯಚಿತ್ರ ಹಾಗೂ ಕಾರ್ಟೂನ್ ನಡುವೆ ಇರುವ ವ್ಯತ್ಯಾಸವನ್ನು ವಿವರಿಸಿದರು. 

Similar News