ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ: ನೋಂದಣಿಗೆ ಸೂಚನೆ

Update: 2022-11-28 14:58 GMT

ಉಡುಪಿ, ನ.28: ಪ್ರಸಕ್ತ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಸರಕಾರ ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂ.ಗೆ 2040 ರೂ. ಮತ್ತು ಗ್ರೇಡ್ ಎ ಭತ್ತಕ್ಕೆ 2060ರೂ. ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸಿದೆ.

ಕರಾವಳಿ ಜಿಲ್ಲೆಗಳಲ್ಲಿ ಸ್ಥಳೀಯವಾಗಿ ಬೆಳೆಯಲಾಗುವ ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ, ಉಮಾ, ಅಭಿಲಾಷ ಮತ್ತು ಎಂಓ4 ಭತ್ತದ ತಳಿಗಳನ್ನು ಜಿಲ್ಲೆಯ ರೈತರಿಂದ ಖರೀದಿಸಿ, ಅದನ್ನು ಕುಚ್ಚಲಕ್ಕಿಯನ್ನಾಗಿ ಪರಿವರ್ತಿಸಿ, ಸಾರ್ವಜನಿಕ ವಿತರಣಾ ಪದ್ಧತಿಯಡಿ ಪಡಿತರ ಫಲಾನುಭವಿಗಳಿಗೆ ವಿತರಿಸಲು ಕೇಂದ್ರ ಸರಕಾರ ಅನುಮತಿ ನೀಡಿದ್ದು, ಸ್ಥಳೀಯ ತಳಿಗಳಭತ್ತಕ್ಕೆ ಪ್ರತಿ ಕ್ವಿಂಟಾಲ್‌ಗೆ 500 ರೂ. ಪ್ರೋತ್ಸಾಹ ಧನ ನೀಡಲು ಆದೇಶಿಸಿದೆ. ಇದರಿಂದ ಪ್ರತಿ ಕ್ವಿಂ. ಭತ್ತಕ್ಕೆ ಒಟ್ಟು 2540 ರೂ. ಬೆಲೆ ನಿಗದಿ ಪಡಿಸಲಾಗಿದೆ.

ಜಿಲ್ಲೆಯ ರೈತರಿಂದ ಪ್ರತಿ ಎಕರೆಗೆ ಗರಿಷ್ಠ 16 ಕ್ವಿಂ.ನಂತೆ ಪ್ರತಿ ರೈತರಿಂದ ಗರಿಷ್ಠ 40 ಕ್ವಿಂ. ಭತ್ತ ಖರೀದಿಸಲು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವನ್ನು ಖರೀದಿ ಏಜೆನ್ಸಿಯನ್ನಾಗಿ ನೇಮಿಸಲಾಗಿದೆ. ಈ ಏಜೆನ್ಸಿ ರೈತರಿಂದ ಭತ ್ತಖರೀದಿಸುವ ನೋಂದಣಿ ಪ್ರಕ್ರಿಯೆಯನ್ನು ಈಗಾಗಲೇ ನವೆಂಬರ್ 21ರಿಂದ ಪ್ರಾರಂಭಿಸಲಾಗಿದ್ದು, ಒಂದು ತಿಂಗಳು ರೈತರ ನೋಂದಣಿ ಕಾರ್ಯವನ್ನು ಉಡುಪಿ, ಕುಂದಾಪುರ ಹಾಗೂ ಕಾರ್ಕಳ ಕೃಷಿ ಮಾರುಕಟ್ಟೆ ಸಮಿತಿಯ ಎಪಿಎಂಸಿ ಯಾರ್ಡ್‌ಗಳಲ್ಲಿ, ಕಾಪು, ಬ್ರಹ್ಮಾವರ, ಕೋಟ, ವಂಡ್ಸೆ ಬೈಂದೂರು ಹಾಗೂ ಅಜೆಕಾರು ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಹೆಬ್ರಿ ತಾಲೂಕು ಕಚೇರಿಯಲ್ಲಿ ಕೈಗೊಳ್ಳಲಿದ್ದು, ಡಿಸೆಂಬರ್ 1ರಿಂದ 2023 ಫೆಬ್ರವರಿ 28ರವರೆಗೆ ಭತ್ತ ಖರೀದಿ ಕಾರ್ಯ ನಡೆಯಲಿದೆ.

ಜಿಲ್ಲೆಯ ರೈತರು ಕೃಷಿ ಇಲಾಖೆಯಿಂದ ನೀಡಿರುವ ಫ್ರೂಟ್ಸ್ ದತ್ತಾಂಶದಲ್ಲಿ ಸೇರ್ಪಡೆಗೊಂಡು ಮತ್ತು ಸೇರ್ಪಡೆ ಗೊಂಡಿರುವ ಬಗ್ಗೆ ಫ್ರೂಟ್ಸ್ ತಂತ್ರಾಂಶದ ಗುರುತಿನ ಸಂಖ್ಯೆಯೊಂದಿಗೆ ಆಧಾರ್ ಜೋಡಣೆಯ ಬ್ಯಾಂಕ್ ಖಾತೆಯ ಮಾಹಿತಿಯೊಂದಿಗೆ ನೋಂದಣಿ ಕೇಂದ್ರದಲ್ಲಿ ಹೆಸರು ನೋಂದಾಯಿಸಿ ಕೊಳ್ಳಬಹುದಾಗಿದೆ. 

ಕೃಷಿ ಇಲಾಖೆಯ ಗುಣಮಟ್ಟ ಪರೀಕ್ಷಕರು ಸರಕಾರ ನಿಗದಿ ಪಡಿಸಿರುವ ಮಾನದಂಡದಂತೆ ಎಫ್‌ಎಕ್ಯೂ ಗುಣಮಟ್ಟ ಹೊಂದಿರುವ ಭತ್ತವನ್ನು ಪರಿಶೀಲಿಸಿ, ಖರೀದಿಸಲು ಕ್ರಮ ಕೈಗೊಳ್ಳಲಿದ್ದು, ರೈತರು ಈ ಯೋಜನೆಯ ಸದುಪಯೋಗ ಪಡೆದು ಕೊಳ್ಳುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Similar News