ದಿ ಕಾಶ್ಮೀರ್ ಫೈಲ್ಸ್ ಟೀಕಿಸಿದ ನಡಾವ್ ಲಪಿಡ್ ಬಗ್ಗೆ ಇಲ್ಲಿದೆ ಕೆಲವೊಂದು ಮಾಹಿತಿ

Update: 2022-11-29 11:58 GMT

ಹೊಸದಿಲ್ಲಿ: ಭಾರತದಲ್ಲಿ ಈ ಹಿಂದೆ ವಿವಾದಕ್ಕೀಡಾಗಿದ್ದ `ದಿ ಕಾಶ್ಮೀರ್ ಫೈಲ್ಸ್' ಚಿತ್ರ ಇದೀಗ ಮತ್ತೆ ಚರ್ಚೆಯ ಕೇಂದ್ರಬಿಂದುವಾಗಿ ಬಿಟ್ಟಿದೆ. ಗೋವಾದಲ್ಲಿ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಸೋಮವಾರ ಮಾತನಾಡಿದ ತೀರ್ಪುಗಾರರ ಮಂಡಳಿ ಮುಖ್ಯಸ್ಥ, ಇಸ್ರೇಲಿ ಚಿತ್ರ ನಿರ್ದೇಶಕ ನಡಾವ್ ಲಪಿಡ್, ದಿ ಕಾಶ್ಮೀರ್ ಫೈಲ್ಸ್ ಅನ್ನು ಪ್ರಚಾರಕ್ಕಾಗಿ ಮಾಡಿದ ಚಿತ್ರ ಹಾಗೂ ಅಶ್ಲೀಲವಾಗಿದೆ ಎಂದು ಹೇಳಿ ವಿವಾದಕ್ಕೀಡಾಗಿದ್ದಾರೆ. ಅಷ್ಟಕ್ಕೂ ಈ ವಿವಾದಾಸ್ಪದ ಹೇಳಿಕೆ ನೀಡಿದ ನಡಾವ್ ಲಪಿಡ್ ಯಾರು ಎಂಬ ಕುತೂಹಲ ಎಲ್ಲೆಡೆ ಇದೆ. ಇಲ್ಲಿದೆ ಕೆಲವೊಂದು ಇಂಟ್ರಸ್ಟಿಂಗ್ ಮಾಹಿತಿ.

ನಡಾವ್ ಲಪಿಡ್ ಹುಟ್ಟಿದ್ದು 1975 ರಲ್ಲಿ ಇಸ್ರೇಲ್‍ನಲ್ಲಿ. ಟೆಲ್-ಅವೀವ್ ವಿವಿಯಲ್ಲಿ ತತ್ವಶಾಸ್ತ್ರ ಕಲಿತ ನಂತರ ಅವರು ಪ್ಯಾರಿಸ್‍ನಲ್ಲಿ ಸಾಹಿತ್ಯ ಅಧ್ಯಯನ ನಡೆಸಿದ್ದರು. 2001 ರಲ್ಲಿ ಅವರು `ಕಂಟಿನ್ಯುವಾ ಬೈಲಂಡೊ' ಎಂಬ ಕಾದಂಬರಿ ಹೊರತಂದಿದ್ದರಲ್ಲದೆ ನಂತರ ಇಸ್ರೇಲ್‍ನಲ್ಲಿ ತಯಾರಾದ ಹಲವು ಸಾಕ್ಷ್ಯಚಿತ್ರಗಳ ಛಾಯಾಗ್ರಾಹಕರಾಗಿದ್ದರು. 2006 ರಲ್ಲಿ ಜೆರುಸಲೆಂನ ಸ್ಯಾಂ ಸ್ಪೀಗೆಲ್ ಫಿಲ್ಮ್ ಸ್ಕೂಲ್‍ನಿಂದ ಅವರು ಪದವಿ ಪಡೆದಿದ್ದರು. ಅವರ ಚೊಚ್ಚಲ ಚಲನಚಿತ್ರ ಪೊಲೀಸ್‍ಮ್ಯಾನ್ ಗೆ ಅವರು 2011 ಲೊಕಾರ್ನೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ  ವಿಶೇಷ ಜ್ಯೂರಿ ಪ್ರಶಸ್ತಿ ಪಡೆದಿದ್ದರು.

ಸಿನೊನಿಮ್ಸ್ ಚಿತ್ರಕ್ಕಾಗಿ ಅವರು 2019 ರಲ್ಲಿ ಬರ್ಲಿನ್ ಚಿತ್ರೋತ್ಸವದಲ್ಲಿ ಗೋಲ್ಡನ್ ಬೇರ್ ಪ್ರಶಸ್ತಿ ಪಡೆದಿದ್ದರು. ಅವರ `ದಿ ಕಿಂಡರ್‍ಗಾರ್ಟನ್ ಟೀಚರ್' ಚಿತ್ರ 2014 ರ ಕೇನ್ಸ್ ಫೀಚರ್ ಫೆಸ್ಟಿವಲ್‍ನಲ್ಲಿ ಕ್ರಿಟಿಕ್ಸ್ ವೀಕ್ ವಿಭಾಗದಲ್ಲಿ ಜಾಗತಿಕ ಪ್ರೀಮಿಯರ್ ಕಂಡಿತ್ತು. 2016 ರಲ್ಲಿ ಅವರು ಕೇನ್ಸ್ ಚಲನಚಿತ್ರೋತ್ಸವದ ಕ್ರಿಟಿಕ್ಸ್ ವೀಕ್ ವಿಭಾಗದ ಜ್ಯೂರಿ ಸದಸ್ಯರಲ್ಲೊಬ್ಬರಾಗಿದ್ದರು.

2021 ರಲ್ಲಿ ಅವರ `ಅಹೇಡ್ಸ್ ನೀ' ಚಿತ್ರವನ್ನು ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗಿತ್ತು

ನಡಾವ್ ಅವರ `ದಿ ಕಿಂಡರ್‍ಗಾರ್ಟನ್ ಟೀಚರ್' ಚಿತ್ರದ ನಟಿ ಸರಿತ್ ಲ್ಯಾರಿ ಅವರು  2014 ರಲ್ಲಿ ನಡೆದ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದರು.

ಶೊಮ್ರೊನ್ (ಸಮರಿಯಾ/ವೆಸ್ಟ್ ಬ್ಯಾಂಕ್) ಫಿಲ್ಮ್ ಫಂಡ್ ಸ್ಥಾಪನೆ ವಿರೋಧಿಸಿ ಬಹಿರಂಗ ಪತ್ರಕ್ಕೆ ಸಹಿ ಹಾಕಿದ್ದ 250 ಇಸ್ರೇಲಿ ಚಿತ್ರ ತಯಾರಕರಲ್ಲಿ ಲಪಿಡ್ ಕೂಡ ಒಬ್ಬರಾಗಿದ್ದರು.

Similar News