ಡಿಜಿಟಲ್ ರೂಪಾಯಿಯ ಪ್ರಾಯೋಗಿಕ ಯೋಜನೆಯನ್ನು ಘೋಷಿಸಿದ ಆರ್‌ಬಿಐ

ಡಿಸೆಂಬರ್ 1 ರಿಂದ ಡಿಜಿಟಲ್ ರೂಪಾಯಿ ಪ್ರಾರಂಭ

Update: 2022-11-29 13:50 GMT

ಹೊಸದಿಲ್ಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಚಿಲ್ಲರೆ ಮಟ್ಟದಲ್ಲಿ ಡಿಜಿಟಲ್ ರೂಪಾಯಿಯ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಡಿಸೆಂಬರ್ 1 ರಿಂದ ರಿಟೇಲ್ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಗಾಗಿ ಪ್ರಾಯೋಗಿಕ ಯೋಜನೆಯೊಂದಿಗೆ ಬರಲಿದೆ ಎಂದು ಆರ್‌ಬಿಐ ಮಂಗಳವಾರ ತಿಳಿಸಿದೆ. ಡಿಜಿಟಲ್ ರೂಪಾಯಿ ಡಿಜಿಟಲ್ ಟೋಕನ್ ರೂಪದಲ್ಲಿರುತ್ತದೆ, ಅದು ಕಾನೂನಿನ ಮನ್ನಣೆಯೂ ದೊರೆಯುತ್ತದೆ ಎಂದು ಆರ್‌ಬಿಐ ಹೇಳಿದೆ.

ಆಯ್ದ ಸ್ಥಳಗಳಲ್ಲಿ ಯೋಜನೆ ಆರಂಭ

ʼಈ ಪ್ರಾಯೋಗಿಕ ಯೋಜನೆಯನ್ನು ಆಯ್ದ ಕೆಲವು ಸ್ಥಳಗಳಲ್ಲಿ ಮಾತ್ರ ಮಾಡಲಾಗುತ್ತದೆ. ಈ ಸಮಯದಲ್ಲಿ ನೀಡಲಾದ ಪೇಪರ್ ಕರೆನ್ಸಿ ಮತ್ತು ನಾಣ್ಯಗಳ ಮೌಲ್ಯಕ್ಕೆ ಅನುಗುಣವಾಗಿ ಈ ಡಿಜಿಟಲ್ ರೂಪಾಯಿಯನ್ನು ನೀಡಲಾಗುತ್ತದೆ. ಈ ಡಿಜಿಟಲ್ ಕರೆನ್ಸಿಯನ್ನು ಬ್ಯಾಂಕ್‌ಗಳ ಮೂಲಕ ವಿತರಿಸಲಾಗುವುದು.ʼ ಎಂದು ಆರ್‌ಬಿಐ ತಿಳಿಸಿದೆ.

ಈ ಪ್ರಾಯೋಗಿಕ ಯೋಜನೆಯು ಆರಂಭದಲ್ಲಿ ನಾಲ್ಕು ನಗರಗಳಲ್ಲಿ ಆರಂಭವಾಗಲಿದ್ದು,  ಮುಂಬೈ, ದಿಲ್ಲಿ, ಬೆಂಗಳೂರು ಮತ್ತು ಭುವನೇಶ್ವರ ದಲ್ಲಿ ಪ್ರಾರಂಭಿಕ ಹಂತದಲ್ಲಿ ಯೋಜನೆ ಆರಂಭಗೊಳ್ಳಲಿದೆ. ಇದರ ನಂತರ ಪ್ರಾಯೋಗಿಕ ಯೋಜನೆಯನ್ನು ಅಹಮದಾಬಾದ್, ಗ್ಯಾಂಗ್ಟಾಕ್, ಗುವಾಹಟಿ, ಹೈದರಾಬಾದ್, ಇಂದೋರ್, ಕೊಚ್ಚಿನ್, ಲಕ್ನೋ, ಪಾಟ್ನಾ ಮತ್ತು ಶಿಮ್ಲಾಗಳಿಗೆ ವಿಸ್ತರಿಸಲಾಗುವುದು ಎಂದು ವರದಿಯಾಗಿದೆ.

ಗ್ರಾಹಕರು ಡಿಜಿಟಲ್ ವ್ಯಾಲೆಟ್‌ಗಳ ಮೂಲಕ ಡಿಜಿಟಲ್ ರೂಪಾಯಿ ವಹಿವಾಟು ನಡೆಸಲು ಸಾಧ್ಯವಾಗುತ್ತದೆ ಎಂದು. ಈ ಡಿಜಿಟಲ್ ವ್ಯಾಲೆಟ್ ಅನ್ನು ಬ್ಯಾಂಕ್‌ಗಳು ನೀಡಲಿದ್ದು, ಮೊಬೈಲ್ ಫೋನ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್‌ ಸಾಧನಗಳ ಮೂಲಕ ಇದನ್ನು ಬಳಸಬಹುದು ಎಂದು ಆರ್‌ಬಿಐ ಹೇಳಿದೆ.

'ವ್ಯವಹಾರಗಳನ್ನು ವ್ಯಕ್ತಿಯಿಂದ ವ್ಯಕ್ತಿಗೆ (P2P) ಮತ್ತು ವ್ಯಕ್ತಿಯಿಂದ ವ್ಯಾಪಾರಿಗೆ (P2M) ಮಾಡಬಹುದು. ವ್ಯಾಪಾರಿಗಳಲ್ಲಿ ಸ್ಥಾಪಿಸಲಾದ QR ಕೋಡ್ ಮೂಲಕ ಪಾವತಿ ಮಾಡಬಹುದು. ಈ ಪ್ರಾಯೋಗಿಕ ಯೋಜನೆಗೆ ಎಂಟು ಬ್ಯಾಂಕ್‌ಗಳನ್ನು ಆಯ್ಕೆ ಮಾಡಲಾಗಿದ್ದು, ಇದು ಹಂತ ಹಂತವಾಗಿ ಕಾರ್ಯರೂಪಕ್ಕೆ ಬರಲಿದೆ. ಮೊದಲ ಹಂತವು ನಾಲ್ಕು ಬ್ಯಾಂಕ್‌ಗಳೊಂದಿಗೆ ಪ್ರಾರಂಭವಾಗಲಿದೆ. ಇವುಗಳಲ್ಲಿ ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಯೆಸ್ ಬ್ಯಾಂಕ್ ಮತ್ತು ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಸೇರಿವೆ. ಇದರ ನಂತರ ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಗಳಲ್ಲಿ ಕೂಡಾ ಈ ಸೇವೆ ಸೌಲಭ್ಯ ಸಿಗಲಿದೆ ಎಂದು ಆರ್‌ಬಿಐ ಮೂಲಗಳು ಹೇಳಿವೆ.

Similar News