ಹೆಜಮಾಡಿ ಟೋಲ್‌ಗೇಟ್ ಶುಲ್ಕ ಹೆಚ್ಚಳ; ಮುಂದುವರಿದ ಗೊಂದಲ

Update: 2022-11-30 16:00 GMT

ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಟೋಲ್‌ಗೇಟ್‌ನಲ್ಲಿ ಕಳೆದ 7 ವರ್ಷಗಳಿಂದ ಪಡೆಯುತಿದ್ದ ಸುಂಕ ಸಂಗ್ರಹವನ್ನು ಡಿ.1ರಿಂದ ನಿಲ್ಲಿಸಿ, ಅದರ ಶುಲ್ಕವನ್ನು ಉಡುಪಿ ಜಿಲ್ಲೆಯ ಹೆಜಮಾಡಿ ಟೋಲ್‌ಗೇಟ್‌ನ ದರದೊಂದಿಗೆ ವಿಲೀನಗೊಳಿಸಿ, ಇಲ್ಲೇ ಎರಡನ್ನೂ ಸೇರಿಸಿ ಪಡೆಯುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಘೋಷಣೆ ನಾಳೆಯಿಂದ ಜಾರಿಗೊಳ್ಳುವ ಬಗ್ಗೆ ಗೊಂದಲಗಳು ಕಾಣಿಸಿಕೊಂಡಿವೆ.

ಪ್ರಾಧಿಕಾರ ಈ ಬಗ್ಗೆ ನ.24ರಂದು ಪ್ರಕಟಣೆಯನ್ನು ಹೊರಡಿಸಿದ್ದರೂ, ಇದುವರೆಗೆ ಸ್ಥಳೀಯವಾಗಿ ಸಾರ್ವಜನಿಕರಿಗೆ ಯಾವುದೇ ಮಾಹಿತಿಯನ್ನಾಗಲಿ, ವಿವರಗಳನ್ನಾಗಲೀ ಬಿಡುಗಡೆಗೊಳಿಸಿಲ್ಲ. ಪ್ರಾಧಿಕಾರ ಸರಿಯಾದ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳದೇ ಹಾಗೂ ಟೋಲ್‌ಗೇಟ್‌ನ ಬಳಕೆದಾರರಾದ ಎಲ್ಲಾ ವಿಧದ ವಾಹನ ಚಾಲಕರಿಗೆ  ಸರಿಯಾದ ಮಾಹಿತಿಗಳನ್ನು ನೀಡದೇ ಇಲ್ಲಿ ಹೆಚ್ಚುವರಿ ಟೋಲ್ ಸಂಗ್ರಹಿಸುವ ಸಾಹಸಕ್ಕೆ ಮುಂದಾಗುವ ಸಾಧ್ಯತೆ ಇಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಹೆಜಮಾಡಿಯಲ್ಲಿ ಹೆಚ್ಚುವರಿ ಟೋಲ್‌ಸಂಗ್ರಹದ ಕುರಿತಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅವರನ್ನು ಪ್ರಶ್ನಿಸಿದಾಗ, ಡಿ.1ರಿಂದ ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ರಕ್ಷಣೆ ಒದಗಿಸುವಂತೆ ತಿಳಿಸಿದ್ದು, ಸ್ಥಳೀಯವಾಗಿ  ಬೇಕಾದ ಎಲ್ಲಾ ಬೆಂಬಲ ನೀಡುವುದಾಗಿ ತಿಳಿಸಿದ್ದೇವೆ ಎಂದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಬಂದ ಸೂಚನೆಯನ್ನು ಸೂಕ್ತ ಕ್ರಮಕ್ಕಾಗಿ ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ರವಾನಿಸಿದ್ದು, ಜಿಲ್ಲಾಡಳಿತ ರಕ್ಷಣೆ ನೀಡುವುದಕ್ಕೆ ಸಿದ್ಧವಾಗಿದೆ ಎಂದು ಕೂರ್ಮಾರಾವ್ ನುಡಿದರು. ಆದರೆ ಹೆಚ್ಚುವರಿ ಟೋಲ್ ಸಂಗ್ರಹಿಸುವ ಮುನ್ನ ಸಾರ್ವಜನಿಕರಿಗೆ ಪ್ರಕಟಣೆಯ ಮೂಲಕ ಎಲ್ಲಾ ಮಾಹಿತಿ  ನೀಡುವುದಾಗಿ ಪ್ರಾಧಿಕಾರ ನಮಗೆ ಭರವಸೆ ನೀಡಿದೆ ಎಂದೂ ಜಿಲ್ಲಾಧಿಕಾರಿ ತಿಳಿಸಿದರು.

ಶುಕ್ರವಾರದಿಂದ ಧರಣಿ:

ಈ ನಡುವೆ ಹೆಜಮಾಡಿಯಲ್ಲಿ ಸುರತ್ಕಲ್ ಅಕ್ರಮ ಟೋಲ್ ಸುಂಕ ಸಂಗ್ರಹದ ನಿರ್ಧಾರವನ್ನು ಕೈಬಿಡುವಂತೆ ಒತ್ತಾಯಿಸಿ ಹಾಗೂ ಹೆಜಮಾಡಿಯಲ್ಲಿ ಟೋಲ್ ಸುಲಿಗೆಗೆ ಅವಕಾಶ ನೀಡಿದ್ದಾರೆಂದು ಆರೋಪಿಸಿ ಬಿಜೆಪಿ ಸಂಸದರ ಹಾಗೂ ಶಾಸಕರ ರಾಜೀನಾಮೆಗೆ ಆಗ್ರಹಿಸಿ ಡಿ.2ರ ಶುಕ್ರವಾರ ಬೆಳಗ್ಗೆ 9:30ರಿಂದ ಹೆಜಮಾಡಿ ಟೋಲ್‌ಗೇಟ್ ಸಮೀಪ ಸಾಮೂಹಿಕ ಧರಣಿ ನಡೆಸಲು ವಿವಿಧ ಸಂಘಟನೆಗಳು ನಿರ್ಧರಿಸಿವೆ.

ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಹಾಗೂ ಸಮಾನ ಮನಸ್ಕ ಸಂಘಟನೆಗಳು ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆ ಇವುಗಳ ನೇತೃತ್ವದಲ್ಲಿ ನಡೆಯುವ ಹೋರಾಟಕ್ಕೆ ಎರಡೂ ಜಿಲ್ಲೆಗಳ ವಿವಿಧ ಸಂಘಟನೆಗಳು ಕೈಜೋಡಿಸ ಲಿವೆ ಎಂದು ತಿಳಿದುಬಂದಿದೆ. 

ಸುರತ್ಕಲ್‌ನಲ್ಲಿ ಕಳೆದ 2015ರಿಂದ ಅಕ್ರಮವಾಗಿ ಸಂಗ್ರಹಿಸುತಿದ್ದ ಟೋಲ್ ಸುಂಕವನ್ನು ಹೆಜಮಾಡಿಯಲ್ಲಿ ಸಂಗ್ರಹಿಸುವ ಆದೇಶವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡಲೇ ಕೈಬಿಡಬೇಕೆಂಬುದು ಸಾಮೂಹಿಕ ಧರಣಿಯ ಪ್ರಮುಖ ಬೇಡಿಕೆಯಾಗಿರುತ್ತದೆ. ಇದರಿಂದ ಒಂದು ತಿಂಗಳಿಗೂ ಅಧಿಕ ಸಮಯದಿಂದ   ಸುರತ್ಕಲ್ ಟೋಲ್‌ಗೇಟ್ ಸಮೀಪ ನಡೆಯುತಿದ್ದ ಅನಿರ್ದಿಷ್ಟಾವಧಿ ಧರಣಿ ಇದೀಗ ಡಿ.2ರಿಂದ ಹೆಜಮಾಡಿ ಟೋಲ್‌ಗೇಟ್ ಸಮೀಪಕ್ಕೆ ಸ್ಥಳಾಂತರಗೊಳ್ಳಲಿದೆ.

ಹೊರೆಯಾಗಲಿದೆ ಹೆಜಮಾಡಿ ಟೋಲ್ ದರ; ಜನರ ಆಕ್ರೋಶ
ಸುರತ್ಕಲ್ ಎನ್‌ಐಟಿಕೆ ಟೋಲ್‌ಗೇಟನ್ನು  ಹೆಜಮಾಡಿ ಟೋಲ್‌ನೊಂದಿಗೆ ವಿಲೀನಗೊಳಿಸುವ ಸರಕಾರದ ನಿರ್ಧಾರದಿಂದ ಹೆಜಮಾಡಿ ಟೋಲ್ ಗೇಟ್ ಮೂಲಕ ಸಂಚರಿಸುವ ವಾಹನಗಳಿಗೆ ಡಿ.1ರಿಂದ ಟೋಲ್ ಶುಲ್ಕ ದುಬಾರಿಯಾಗಲಿದೆ.

ಸತತ ಆರು ವರ್ಷಗಳ ಕಾಲ ಸುರತ್ಕಲ್ ಟೋಲ್‌ಗೇಟ್ ವಿರುದ್ಧ  ನಡೆದ ಹೋರಾಟದಿಂದ ಕೇಂದ್ರ ಸರಕಾರ  ಕೊನೆಗೂ ಸುರತ್ಕಲ್ ಟೋಲ್‌ಗೇಟ್‌ನ್ನು ತೆರವುಗೊಳಿಸುವ ನಿರ್ಧಾರದ ಬದಲು ಅದನ್ನು ಹೆಜಮಾಡಿಯೊಂದಿಗೆ ವಿಲೀನಗೊಳಿಸಿ ಆದೇಶ ಹೊರಡಿಸಿದೆ. ಈ ಆದೇಶದಂತೆ ಡಿ.1ರಿಂದ ಹೆಜಮಾಡಿ ಟೋಲ್‌ನಲ್ಲೇ ಸುರತ್ಕಲ್ ಟೋಲ್ ಮತ್ತು ಹೆಜಮಾಡಿ ಟೋಲ್ ದರವನ್ನು ಹೊಂದಾಣಿಕೆ ಮಾಡಿಕೊಳ್ಳಲಾಗಿದೆ.

ಸರಕಾರದ ಈ ನಿರ್ಧಾರದಿಂದ ಎರಡೂ ಜಿಲ್ಲೆಗಳ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಎರಡು ಟೋಲ್‌ಗಳು ವಿಲೀನಗೊಳ್ಳಬಾರದು. ಬದಲು ಸುರತ್ಕಲ್ ಟೋಲ್‌ನ್ನು ರದ್ದುಗೊಳಿಸಬೇಕು ಎಂದು ಸ್ಥಳೀಯ ಹೋರಾಟ ಸಮಿತಿ ಸಹಿತ ಜನಸಾಮಾನ್ಯರು ಒಕ್ಕೊರಳಿನಿಂದ ಆಗ್ರಹಿಸಿದ್ದಾರೆ.

ಪಡುಬಿದ್ರಿ-ಮೂಲ್ಕಿಗೆ 155ರೂ.: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಗದಿ ಪಡಿಸಿದ ಟೋಲ್ ಶುಲ್ಕವೇ ಜಾರಿಗೊಂಡರೆ ಪಡುಬಿದ್ರಿಯಿಂದ ಮುಲ್ಕಿಗೆ ಇನ್ನು ಮುಂದೆ ಕಾರಿನಲ್ಲಿ ಹೋಗಿ ಬರುವುದು ಕೈಸುಡುವಷ್ಟು ದುಬಾರಿಯಾಗಲಿದೆ. ಮಂಗಳೂರು ಜಿಲ್ಲೆಯ ಮುಲ್ಕಿ ಮತ್ತು ಉಡುಪಿ ಜಿಲ್ಲೆಯ ಪಡುಬಿದ್ರಿ ಅಕ್ಕಪಕ್ಕದ ಊರು. ಈ ಎರಡೂ ಊರುಗಳ ನಡುವಿನ ದೂರ ಕೇವಲ 7 ಕಿಮೀ. ಮಾತ್ರ. ಗಡಿ ಪ್ರದೇಶವಾಗಿದ್ದರೂ ಈ ಎರಡೂ ಊರಿನ ಜನರು ಅತ್ತಿಂದಿತ್ತ ದಿನನಿತ್ಯಲೂ ಹಲವು ಕಾರ್ಯಗಳಿಗೆ ಹೋಗಿ ಬರುವುದು ಸಾಮಾನ್ಯ.

ಆದರೆ ಸುರತ್ಕಲ್ ಟೋಲ್‌ಗೇಟ್ ಹೆಜಮಾಡಿಯೊಂದಿಗೆ ವಿಲೀನವಾದರೆ ಇಲ್ಲಿನ ಜನರು ಇನ್ನು ಕಾರಿನಲ್ಲಿ ಕೇವಲ 7 ಕಿಮೀ ದೂರಕ್ಕೆ ಪಡುಬಿದ್ರಿಯಿಂದ ಮುಲ್ಕಿಗೆ ಹೋಗಿ ಬರಲು 155 ರೂ. ವ್ಯಯಿಸಬೇಕು. ಅಂದರೆ ಪ್ರತಿ ಕಿಮೀ ಒಂದಕ್ಕೆ 22.20ರೂ. ಟೋಲ್‌ನ್ನು(ಪೆಟ್ರೋಲ್ ವೆಚ್ಚ ಹೊರತುಪಡಿಸಿ)  ನೀಡ ಬೇಕಾಗುತ್ತದೆ.!

ದಿನದಿಂದ ದಿನಕ್ಕೆ ಗಗನಕ್ಕೆ ಏರುತಿರುವ ಅಗತ್ಯ ವಸ್ತುಗಳ ಬೆಲೆ ಒಂದಡೆ ಯಾದರೆ, ಈಗ ಟೋಲ್ ಮೂಲಕ ಜನರ ಸುಲಿಗೆ ನಡೆಸಿ ಜನ ಸಾಮಾನ್ಯ ನ ಬದುಕಿಗೆ ಕೊಳ್ಳಿ ಇಡಲು ಸರಕಾರ ತಯಾರಿ ನಡೆಸುತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ  ಹಗಲು ದರೋಡೆಯನ್ನು ಯಾವುದೇ ಕಾರಣಕ್ಕೂ ಒಪ್ಪುವಂತದ್ದಲ್ಲ. ಇದು ಡಬಲ್ ಇಂಜಿನ್ ಸರಕಾರದ ಡಬಲ್ ಲೂಟಿ. ಇಷ್ಟಾದರೂ ಇನ್ನೂ ಬಾಯಿ ಮುಚ್ಚಿ ಕುಳಿತಿರುವ ಸ್ಥಳೀಯ ಶಾಸಕರು, ಸಂಸದರು ಧ್ವನಿ ಎತ್ತದಿರು ವುದು ವಿಪರ್ಯಾಸ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ದುಪ್ಪಟ್ಟು ದರವನ್ನು ರದ್ದು ಗೊಳಿಸದ್ದಿದಲ್ಲಿ ಯುವ ಕಾಂಗ್ರೆಸ್ ಜನ ವಿರೋಧಿ ನಿರ್ಧಾರದ ವಿರುದ್ಧ  ಸಾರ್ವಜನಿಕರೊಂದಿಗೆ ಸೇರಿ ಪ್ರತಿಭಟನೆಗೆ ನಡೆಸಲಿದೆ.
-ರಮೀಝ್ ಹುಸೈನ್, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ.

Similar News