ಗಲ್ವಾನ್ ಘರ್ಷಣೆ ಬಳಿಕ ಭಾರತದ ವಿಷಯದಲ್ಲಿ ಮಧ್ಯಪ್ರವೇಶಿಸದಂತೆ ಅಮೆರಿಕಕ್ಕೆ ಎಚ್ಚರಿಸಿದ್ದ ಚೀನಾ: ವರದಿ

Update: 2022-11-30 18:18 GMT

ವಾಷಿಂಗ್ಟನ್, ನ.30: 2020ರ ಜೂನ್‌ನಲ್ಲಿ ನಡೆದ ಗಲ್ವಾನ್ ಘರ್ಷಣೆಯ ಬಳಿಕ, ಭಾರತದೊಂದಿಗಿನ ತನ್ನ ಸಂಬಂಧದಲ್ಲಿ ಮಧ್ಯಪ್ರವೇಶಿಸದಂತೆ ಅಮೆರಿಕಕ್ಕೆ ಚೀನಾ ಎಚ್ಚರಿಕೆ ನೀಡಿತ್ತು ಎಂದು ಮಂಗಳವಾರ ಪ್ರಕಟವಾದ ಪೆಂಟಗಾನ್‌ನ ವರದಿ ಪ್ರತಿಪಾದಿಸಿದೆ.

ಈ ಘರ್ಷಣೆಯಲ್ಲಿ ಭಾರತದ 21 ಯೋಧರು ಹತರಾಗಿದ್ದರೆ, ತನ್ನ 4 ಯೋಧರು ಹತರಾಗಿರುವುದಾಗಿ ಚೀನಾ ಹೇಳಿಕೊಂಡಿದೆ. ಅಂದಿನಿಂದ ಉಭಯ ದೇಶಗಳ ಗಡಿ ಬಿಕ್ಕಟ್ಟು ಮುಂದುವರಿದಿದೆ. 2021ರ ವರ್ಷವಿಡೀ ವಾಸ್ತವಿಕ ನಿಯಂತ್ರಣ ರೇಖೆ(ಎಲ್‌ಎಸಿ)ಯುದ್ದಕ್ಕೂ ಚೀನಾ ಮೂಲಸೌಕರ್ಯ ನಿರ್ಮಾಣ ಮತ್ತು ಮಿಲಿಟರಿ ಪಡೆಗಳ ನಿಯೋಜನೆಯನ್ನು ಮುಂದುವರಿಸಿತ್ತು . ಗಲ್ವಾನ್ ಘರ್ಷಣೆ ಕಳೆದ 46 ವರ್ಷಗಳಲ್ಲೇ ಉಭಯ ಸೇನೆಗಳ ನಡುವಿನ ಅತ್ಯಂತ ಮಾರಣಾಂತಿಕ ಘರ್ಷಣೆಯಾಗಿದೆ ಎಂದು ಮಂಗಳವಾರ ಪೆಂಟಗಾನ್(ಅಮೆರಿಕದ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿ) ಬಿಡುಗಡೆ ಮಾಡಿರುವ ‘ದಿ 2022 ಚೀನಾ ಮಿಲಿಟರಿ ಪವರ್ ರಿಪೋರ್ಟ್’ನಲ್ಲಿ ಉಲ್ಲೇಖಿಸಲಾಗಿದೆ

ಗಡಿಯಲ್ಲಿನ ಉದ್ವಿಗ್ನತೆ ಶಮನಕ್ಕೆ ಭಾರತದೊಂದಿಗೆ ಮಾತುಕತೆಯ ಸಂದರ್ಭದಲ್ಲೂ ಚೀನಾ ತನ್ನ ಕೃತ್ಯವನ್ನು ಮುಂದುವರಿಸಿತ್ತು. ಆದರೆ, ಭಾರತದೊಂದಿಗಿನ ದ್ವಿಪಕ್ಷೀಯ ಸಹಕಾರ ಸಂಬಂಧಕ್ಕೆ ಹಾನಿಯಾಗುವುದನ್ನು ತಪ್ಪಿಸಲು ಮತ್ತು ಭಾರತವು ಅಮೆರಿಕದೊಂದಿಗೆ ಮತ್ತಷ್ಟು ನಿಕಟ ಸಹಕಾರ ಸಂಬಂಧದತ್ತ ಮುಂದುವರಿಯುವುದನ್ನು ತಡೆಯಲು, ಬಿಕ್ಕಟ್ಟಿನ ತೀವ್ರತೆಯನ್ನು ಕಡಿಮೆಗೊಳಿಸಲು ಚೀನಾ ಅಧಿಕಾರಿಗಳು ಪ್ರಯತ್ನಿಸಿದರು. ಭಾರತದೊಂದಿಗಿನ ಸಂಬಂಧದಲ್ಲಿ ಮಧ್ಯಪ್ರವೇಶಿಸದಂತೆ ಚೀನಾ ಇದೇ ಸಂದರ್ಭ ಅಮೆರಿಕವನ್ನು ಎಚ್ಚರಿಸಿತ್ತು’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Similar News