2037ರ ವೇಳೆಗೆ ಭಾರತದಲ್ಲಿ ಪ್ರತಿ 15 ಸೆಕೆಂಡ್ ಗೊಂದು ಏರ್ ಕಂಡಿಷನರ್ ಗೆ ಬೇಡಿಕೆಯ ಸಾಧ್ಯತೆ: ವಿಶ್ವಬ್ಯಾಂಕ್

Update: 2022-12-01 13:33 GMT

ಹೊಸದಿಲ್ಲಿ,ಡಿ.1: ಹವಾಮಾನ ಬದಲಾವಣೆಯಿಂದಾಗಿ ತೀವ್ರ ಉಷ್ಣಮಾರುತದ ವಿರುದ್ಧ ಭಾರತವು ಹೋರಾಡುತ್ತಿರುವಾಗ ಸುಸ್ಥಿರ ಕೂಲಿಂಗ್ (ವಾತಾವರಣವನ್ನು ತಂಪಾಗಿಸುವಿಕೆ) ತಂತ್ರವು ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ಇಂಗಾಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ದೇಶಕ್ಕೆ ನೆರವಾಗುವುದು ಮಾತ್ರವಲ್ಲ, 2040ರ ವೇಳೆಗೆ 1.6 ಲ.ಕೋ.ಡಾ.ಗಳ ಹೂಡಿಕೆ ಅವಕಾಶವನ್ನು ತೆರೆಯುತ್ತದೆ ಎಂದು ವಿಶ್ವಬ್ಯಾಂಕ್ (World Bank)ನ ನೂತನ ವರದಿಯೊಂದು ತಿಳಿಸಿದೆ.

‘ಭಾರತದ ಕೂಲಿಂಗ್ ಕ್ಷೇತ್ರದಲ್ಲಿ ಹವಾಮಾನ ಹೂಡಿಕೆಯ ಅವಕಾಶಗಳು’ ವರದಿಯು 2037ರ ವೇಳೆಗೆ ಭಾರತದಲ್ಲಿ ಕೂಲಿಂಗ್ ಉಪಕರಣಗಳಿಗೆ ಬೇಡಿಕೆ ಈಗಿನ ಮಟ್ಟಕ್ಕೆ ಹೋಲಿಸಿದರೆ ಎಂಟು ಪಟ್ಟುಗಳಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದೂ ಹೇಳಿದೆ. ಮುಂದಿನ ಎರಡು ದಶಕಗಳಲ್ಲಿ ಪ್ರತಿ 15 ಸೆಕೆಂಡ್ ಗೊಂದು ಏರ್ಕಂಡಿಷನರ್ ಗೆ ಬೇಡಿಕೆಯಿರಲಿದೆ ಮತ್ತು ಇದು ವಾರ್ಷಿಕ ಹಸಿರುಮನೆ ಅನಿಲ ಹೊರಸೂಸುವಿಕೆಯಲ್ಲಿ ಶೇ.435ರಷ್ಟು ಏರಿಕೆಗೆ ಕಾರಣವಾಗಲಿದೆ ಎಂದು ವರದಿಯು ಬೆಟ್ಟು ಮಾಡಿದೆ.

ಆದಾಗ್ಯೂ, ಭಾರತದ ಹೆಚ್ಚಿನ ಜನಸಂಖ್ಯೆಗೆ ಆಗಲೂ ಕೂಲಿಂಗ್ ಉಪಕರಣಗಳನ್ನು ಖರೀದಿಸಲು ಸಾಧ್ಯವಾಗದಿರಬಹುದು. ತಾಪಮಾನ ಒತ್ತಡದಿಂದಾಗಿ ಉತ್ಪಾದಕತೆಯಲ್ಲಿ ಕುಸಿತದಿಂದ 2030ರ ವೇಳೆಗೆ ಸುಮಾರು 3.5 ಕೋ.ಜನರು ಉದ್ಯೋಗಗಳನ್ನು ಕಳೆದುಕೊಳ್ಳುವ ನಿರೀಕ್ಷೆಯಿದೆ ಎಂದು ವರದಿಯು ಪ್ರತಿಪಾದಿಸಿದೆ.

ಭಾರತದ ಕೂಲಿಂಗ್ ತಂತ್ರವು ಜೀವಗಳನ್ನು ಮತ್ತು ಜೀವನೋಪಾಯಗಳನ್ನು ರಕ್ಷಿಸಲು ನೆರವಾಗಬಲ್ಲದು, ಇಂಗಾಲ ಹೊರಸೂಸುವಿಕೆಯನ್ನು ತಗ್ಗಿಸಬಲ್ಲದು ಮತ್ತು ಇದೇ ವೇಳೆ ಭಾರತವನ್ನು ಹಸಿರು ಕೂಲಿಂಗ್ ಉಪಕರಣಗಳ ತಯಾರಿಕೆಯ ಜಾಗತಿಕ ಕೇಂದ್ರವನ್ನಾಗಿಸಬಲ್ಲದು. ಈ ವರದಿಯು 2040ರ ವೇಳೆಗೆ ವಾರ್ಷಿಕ ಅಂಗಾರಾಮ್ಲ ಅನಿಲ ಹೊರಸೂಸುವಿಕೆಯನ್ನು 30 ಕೋ.ಟನ್ಗಳನ್ನು ಕಡಿಮೆಗೊಳಿಸಲು ಮಾರ್ಗಸೂಚಿಯನ್ನು ಒದಗಿಸುತ್ತದೆ ಎಂದು ವಿಶ್ವಬ್ಯಾಂಕ್ ನಿರ್ದೇಶಕ (ಭಾರತ) ಆಗಸ್ಟೆ ಟ್ಯಾನೊ ಕುವಾಮೆ (Auguste Tano Kwame)ಹೇಳಿದ್ದಾರೆ.

2050ರ ವೇಳೆಗೆ ಕಟ್ಟಡಗಳಲ್ಲಿ ವಾತಾವರಣ ತಂಪುಗೊಳಿಸುವ ಪ್ರಕ್ರಿಯೆಯೊಂದೇ ದೇಶದ ವಿದ್ಯುತ್ ಬೇಡಿಕೆಯಲ್ಲಿ ಶೇ.45ರಷ್ಟು ಪಾಲನ್ನು ಹೊಂದಿರುವ ನಿರೀಕ್ಷೆಯಿದೆ ಎಂದು ಹೇಳಿರುವ ವರದಿಯು,ತಾಪಮಾನದಿಂದ ಎಲ್ಲರಿಗೂ ನಿರಾಳತೆಯನ್ನು ಒದಗಿಸಲು ಸರಕಾರವು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗುತ್ತದೆ ಎಂದು ಬೆಟ್ಟು ಮಾಡಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಮತ್ತು ಅದರಲ್ಲಿ ಹೇಗೆ ಕೂಲಿಂಗ್ ತಾಂತ್ರಿಕತೆಗಳನ್ನು ಅಳವಡಿಸಬಹುದು ಎನ್ನುವುದನ್ನು ವರದಿಯು ಪ್ರಸ್ತಾಪಿಸಿದೆ.
ಗುಜರಾತ್ ಇಂಟರ್ನ್ಯಾಷನಲ್ ಟೆಕ್-ಸಿಟಿ (ಗಿಫ್ಟ್ ಸಿಟಿ)ಯಲ್ಲಿ ಡಿಸ್ಟ್ರಿಕ್ಟ್ ಕೂಲಿಂಗ್ ತಂತ್ರಜ್ಞಾನದ ಬಳಕೆಯನ್ನು ವರದಿಯು ಎತ್ತಿ ತೋರಿಸಿದೆ. ಈ ಕಾರ್ಯವಿಧಾನದಲ್ಲಿ ಕೇಂದ್ರ ಸ್ಥಾವರವು ಭೂಗತ ಕೊಳವೆಗಳ ಮೂಲಕ ಹಲವಾರು ಕಟ್ಟಡಗಳಿಗೆ ತಂಪಾದ ವಾಯುವನ್ನು ವಿತರಿಸುತ್ತದೆ. ಇದು ಪ್ರತ್ಯೇಕ ಕಟ್ಟಡಗಳನ್ನು ತಂಪಾಗಿಸುವ ವೆಚ್ಚವನ್ನು ತಗ್ಗಿಸಲು ಪರಿಣಾಮಕಾರಿ ಮಾರ್ಗವಾಗಿದೆ ಮತ್ತು ವಿದ್ಯುತ್ ಬಿಲ್ಗಳಲ್ಲಿ ಕನಿಷ್ಠ ಶೇ.20ರಿಂದ ಶೇ.30ರಷ್ಟು ಉಳಿತಾಯವನ್ನು ಸಾಧ್ಯವಾಗಿಸುತ್ತದೆ ಎಂದು ವರದಿಯು ತಿಳಿಸಿದೆ.

ಕಾರು ಇತ್ಯಾದಿಗಳಂತಹ ಪ್ರಯಾಣಿಕ ಸಾರಿಗೆ ವಾತಾನುಕೂಲ ಕ್ಷೇತ್ರದಲ್ಲಿ ಇಂಧನ ಬಳಕೆಯು ಮುಂದಿನ ದಶಕದಲ್ಲಿ ಎರಡು ಪಟ್ಟು ಮತ್ತು 2038ರ ವೇಳೆಗೆ ನಾಲ್ಕು ಪಟ್ಟು ಹೆಚ್ಚಲಿದೆ ಎಂದು ವರದಿಯು ಅಂದಾಜಿಸಿದೆ.

ಕೂಲಿಂಗ್ಗಾಗಿ ಭಾರತದ ವಾರ್ಷಿಕ ಶೀತಕ ಬೇಡಿಕೆಯು 2038ರ ವೇಳೆಗೆ ಆರು ಪಟ್ಟು ಹೆಚ್ಚುವ ನಿರೀಕ್ಷೆಯಿದೆ ಎಂದೂ ವರದಿಯು ಹೇಳಿದೆ.

Similar News