ಮಾತೃತ್ವ- ಗುರುತ್ವದ ಸಂಗಮದಿಂದ ಲೋಕಕಲ್ಯಾಣ: ರಾಘವೇಶ್ವರ ಶ್ರೀ

ಕೊಲ್ಲೂರು: ವಾರಣಾಸಿ ರಾಮಕೃಷ್ಣ ಭಟ್‌ರಿಗೆ ಪ್ರಶಸ್ತಿ ಪ್ರದಾನ

Update: 2022-12-01 13:46 GMT

ಕೊಲ್ಲೂರು : ಮಾತೃತ್ವ ಹಾಗೂ ಗುರುತ್ವದ ಸಮಾಗಮದಿಂದಷ್ಟೇ ಲೋಕ ಕಲ್ಯಾಣ ಸಾಧ್ಯ ಎಂದು ಹೊಸನಗರ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದ್ದಾರೆ. 

ಕೊಲ್ಲೂರು ಕ್ಷೇತ್ರದ ಪ್ರಧಾನ ಅರ್ಚಕ ಶ್ರೀಧರ ಅಡಿಗರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲೆ ಕೋಳ್ಯೂರು ಗ್ರಾಮದ ಸಂಸ್ಕೃತ ಪಂಡಿತ ವಾರಣಾಸಿ ರಾಮಕೃಷ್ಣ ಭಟ್‌ರಿಗೆ ಪಾಂಡಿತ್ಯ ಪುರಸ್ಕಾರ ಪ್ರದಾನ ಮಾಡಿ ಅವರು ಆಶೀರ್ವಚನ ನೀಡುತಿದ್ದರು. 

ತಾಯಿ ಎಂದರೆ ಹೃದಯ. ಗುರು ಎಂದರೆ ದೃಷ್ಟಿ. ತಾಯಿ ವಾತ್ಸಲ್ಯವನ್ನು ನೀಡಿದರೆ, ಗುರು ಜೀವಕ್ಕೆ ದೃಷ್ಟಿಯನ್ನು ಕೊಡುತ್ತಾನೆ ಎಂದು ವಿಶ್ಲೇಷಿಸಿದ ಅವರು, ಗುರುವಿಗೆ ಅಳಿವಿಲ್ಲ. ಗುರು ತ್ರಿಮೂರ್ತಿ ಸ್ವರೂಪ ಎಂದು ನಾವು ಕಾಣಬೇಕು ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಾಮಕೃಷ್ಣ ಭಟ್ಟರು, ಪುರಸ್ಕಾರ ಆಧುನಿಕ ಕಾಲಘಟ್ಟದಲ್ಲಿ ಸಾಮಾನ್ಯ. ಆದರೆ ಇಂದಿನ ಅನುಗ್ರಹಪೂರ್ವಕ ಪುರಸ್ಕಾರ ಜೀವಮಾನದ ಅವಿಸ್ಮರಣೀಯ ಘಟನೆ ಎಂದರು.

ವಿಶ್ವೇಶ್ವರ ಅಡಿಗ ದಂಪತಿ ಸಭಾ ಪೂಜೆ ನೆರವೇರಿಸಿದರು. ಕೊಲ್ಲೂರು ಕ್ಷೇತ್ರದ ಪ್ರಧಾನ ಅರ್ಚಕ ಶ್ರೀಧರ ಅಡಿಗ ಮಾತನಾಡಿದರು. ರಾಘವೇಶ್ವರ ಶ್ರೀಗಳು ಸಂಕಲ್ಪಿಸಿದ ಪಂಚಕೋಟಿ ಪಂಚಾಕ್ಷರಿ ಜಪದ ರುದ್ರಾಕ್ಷಿ ಮಾಲೆಗಳನ್ನು ಲೋಕಾರ್ಪಣೆ ಮಾಡಲಾಯಿತು. 

ಶ್ರೀಮಠದ ಲೋಕ ಸಂಪರ್ಕಾಧಿಕಾರಿ ಹರಿಪ್ರಸಾದ್ ಪೆರಿಯಾಪು ಪ್ರಾಸ್ತಾವಿಕ ವಾಗಿ ಮಾತನಾಡಿದರು. ದಾ.ನ.ಶ್ರೀನಿವಾಸ ಭಟ್ ಪ್ರಶಸ್ತಿ ಪತ್ರ ವಾಚಿಸಿದರು. ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಮಿತ್ತೂರು ಕೇಶವ ಭಟ್, ಪ್ರಧಾನ ಕಾರ್ಯದರ್ಶಿ ಪಿದಮಲೆ ನಾಗರಾಜ ಭಟ್, ಉಪಾಧ್ಯಕ್ಷೆ ಶೈಲಜಾ ಭಟ್, ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು ಮತ್ತಿತರರು ಉಪಸ್ಥಿತರಿದ್ದರು.

Similar News