ದಿಲ್ಲಿ ಅಬಕಾರಿ ನೀತಿ ಪ್ರಕರಣ : ಈ.ಡಿ.ಯಿಂದ ಟಿಆರ್ಎಸ್ ನಾಯಕಿ ಕವಿತಾ ಹೆಸರು ಉಲ್ಲೇಖ

Update: 2022-12-01 14:15 GMT

ಹೊಸದಿಲ್ಲಿ,:  ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಬುಧವಾರ ತೆಲಂಗಾಣ ರಾಷ್ಟ್ರ ಸಮಿತಿ ಎಂಎಲ್ ಸಿ  ಕೆ. ಕವಿತಾ (k kavita )ಅವರ ಹೆಸರು ಸೇರಿಸಿದೆ.

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್(K. Chandrasekhar) ಅವರ ಪುತ್ರಿ ಕವಿತಾ ಈ ಪ್ರಕರಣದಲ್ಲಿ ಬಂಧಿತನಾಗಿರುವ ಉದ್ಯಮಿ ವಿಜಯ್ ನಾಯರ್(Vijay Nair) ಮೂಲಕ ಆಮ್ ಆದ್ಮಿ ಪಕ್ಷದ ನಾಯಕರಿಗೆ ಕನಿಷ್ಠ 100 ಕೋ. ರೂ. ಲಂಚ ಪಾವತಿಸಿದ  ದಕ್ಷಿಣ ಗುಂಪಿನ ಭಾಗವಾಗಿದ್ದರು  ಎಂದು ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ಸಲ್ಲಿಸಿದ ಹೇಳಿಕೆಯಲ್ಲಿ ಪ್ರತಿಪಾದಿಸಿದೆ.

 ರಾಜ್ಯದ ಬೊಕ್ಕಸದ ವೆಚ್ಚದಿಂದ ಕಾನೂನು ಬಾಹಿರ ನಿಧಿ ಉತ್ಪಾದಿಸಲು ಅಬಕಾರಿ ನೀತಿಯನ್ನು ಸಾಧನವಾಗಿ ಆಮ್ ಆದ್ಮಿ ಪಕ್ಷದ ನಾಯಕರು ಪರಿಗಣಿಸಿದ್ದರು ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ ಎಂದು ‘ದಿ ಹಿಂದು’ ('The Hindu')ವರದಿ ಮಾಡಿದೆ.

ಮಂಗಳವಾರ ಬಂಧಿಸಲಾದ ಅಮಿತ್ ಅರೋರ(Amit Arora) ಅವರನ್ನು ಕಸ್ಟಡಿ ಕೋರಿದ ಸಂದರ್ಭ ಜಾರಿ ನಿರ್ದೇಶನಾಲಯ ಈ ಪ್ರತಿಪಾದನೆ ಮಾಡಿದೆ. ಅರೋರಾ ಗುರುಗ್ರಾಮ ಮೂಲದ ಬಡ್ಡಿ ರಿಟೈಲ್ ನ ನಿರ್ದೇಶಕ ಹಾಗೂ ಪ್ರಕರಣದಲ್ಲಿ ಆರೋಪಿಯಾಗಿರುವ ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯ (Manish Sisodia)ಅವರ ಆಪ್ತ.

ಪ್ರಕರಣಕ್ಕೆ ಸಂಬಂಧಿಸಿ ಆಮ್ ಆದ್ಮಿ ಪಕ್ಷದ ಸಂವಹನ ವಿಭಾಗದ ಉಸ್ತುವಾರಿ ನಾಯರ್ನನ್ನು ಸಿಬಿಐ ಸೆಪ್ಟಂಬರ್ ನಲ್ಲಿ ಬಂಧಿಸಿತ್ತು.  ನೂತನ ಅಬಕಾರಿ ನೀತಿಯಲ್ಲಿ ಭ್ರಷ್ಟಾಚಾರದ ಆರೋಪದಲ್ಲಿ ಆಗಸ್ಟ್ 17ರಂದು ಸಿಬಿಐ ಸಿಸೋಡಿಯಾ ಹಾಗೂ ಇತರ 14 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿತ್ತು.

ಇದಕ್ಕೆ ಗುರುವಾರ ಪ್ರತಿಕ್ರಿಯಿಸಿದ ಕವಿತಾ, ‘‘ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆದರೂ ಪ್ರಧಾನಿ ಅವರಿಗಿಂತ ಮುನ್ನ ಜಾರಿ ನಿರ್ದೇಶನಾಲಯ ಬರುತ್ತದೆ. ನೀವು ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಂಡು ಚುನಾವಣೆಯಲ್ಲಿ ಜಯ ಗಳಿಸಲಾರಿರಿ’’ ಎಂದಿದ್ದಾರೆ.

"ಇತ್ತೀಚೆಗಿನ ದಿನಗಳಲ್ಲಿ ಚುನಾವಣೆ ಇರುವ ರಾಜ್ಯಗಳಲ್ಲಿ ಮೋದಿಗಿಂತ ಮೊದಲು ಈ.ಡಿ., ಸಿಬಿಐ ಸೇರಿದಂತೆ ಕೇಂದ್ರ ಸರಕಾರದ ಅಧೀನ ಸಂಸ್ಥೆಗಳ ದಾಳಿ ಸಾಮಾನ್ಯವಾಗಿದೆ. ತೆಲಂಗಾಣದಲ್ಲಿ ಸಿಬಿಐ, ಇ.ಡಿ. ತಂತ್ರ ಕೆಲಸ ಮಾಡುವುದಿಲ್ಲ. ಬೇಕಿದ್ದರೆ ನನ್ನನ್ನು ಜೈಲಿಗೆ ಕಳುಹಿಸಲಿ. ಯಾರೂ ಭಯಪಡುವುದಿಲ್ಲ. ಬಿಜೆಪಿ ಹಣೆಬರಹವನ್ನು ಜನತೆ ಮುಂದಿಡುವುದನ್ನು ನಿಲ್ಲಿಸುವುದಿಲ್ಲ".

- ಕೆ. ಕವಿತಾ, ಟಿಆರ್ಎಸ್ ನಾಯಕಿ

Similar News