ಶಾಲೆಯ ಬಚ್ಚಲುಕೋಣೆ,ನೀರಿನ ಟ್ಯಾಂಕ್ ಸ್ವಚ್ಛತೆಗೆ ದಲಿತ ವಿದ್ಯಾರ್ಥಿಗಳ ಬಳಕೆ
ಡೆಂಗ್ಯೊ ಪೀಡಿತ ಬಾಲಕನಿಂದ ಘಟನೆ ಬೆಳಕಿಗೆ
ಇರೋಡ್,ಡಿ.1: ತಮಿಳುನಾಡಿ(Tamil Nadu)ನ ಇರೋಡ್ ಜಿಲ್ಲೆಯ ಸರಕಾರಿ ಪ್ರಾಥಮಿಕ ಶಾಲೆಯೊಂದರ ದಲಿತ ವಿದ್ಯಾರ್ಥಿಗಳಿಂದ ಶಾಲೆಯ ಬಚ್ಚಲು ಕೋಣೆ(Closet room) ಹಾಗೂ ನೀರಿನ ಟ್ಯಾಂಕ್ಅನ್ನು ನಿಯಮಿತವಾಗಿ ಬ್ಲೀಚಿಂಗ್ ಹುಡಿ ಬಳಸಿ ಸ್ವಚ್ಥಗೊಳಿಸಲಾಗುತ್ತಿತ್ತೆಂಬುದು ಬಹಿರಂಗವಾಗಿದೆ.
ವಿಷಯ ಬೆಳಕಿಗೆ ಬಂದ ಬಳಿಕ ಶಾಲಾ ಮುಖ್ಯೋಪಾಧ್ಯಾಯಿನಿಯನ್ನು ಅಮಾನತುಗೊಳಿಸಲಾಗಿದೆ ಹಾಗೂ ಆಕೆಯ ವಿರುದ್ಧ ಪರಿಶಿಷ್ಟ ಪಂಗಡಗಳ(ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಶಾಲೆಯಲ್ಲಿನ ದಲಿತ ಸಮುದಾಯದ ವಿದ್ಯಾರ್ಥಿಯೊಬ್ಬನನ್ನು ಪೆರುಂದರೈ ಸರಕಾರಿ ಆಸ್ಪತ್ರೆಗೆ ದಾಖಲಿಸಿದಾಗ ಘಟನೆಯು ಬಯಲಿಗೆ ಬಂದಿತೆಂದು ಮೂಲಗಳು ತಿಳಿಸಿವೆ.
ಐದನೇ ತರಗತಿಯ ಈ ವಿದ್ಯಾರ್ಥಿಗೆ ಡೆಂಗೆ ತಗಲಿರುವುದು ವೈದ್ಯಕೀಯ ತಪಾಸಣೆಯಿಂದ ಪತ್ತೆಯಾಯಿತು. ಹೇಗೆ ರೋಗ ತಗಲಿರಬಹುದೆಂದು ಪಾಲಕರು,ಪುತ್ರನಲ್ಲಿ ಪ್ರಶ್ನಿಸಿದಾಗ, ತಾನು ಹಾಗೂ ಇತರ ಕೆಲವು ವಿದ್ಯಾರ್ಥಿಗಳಿಂದ ಶಾಲೆಯ ಬಚ್ಚಲುಕೋಣೆ ಹಾಗೂ ನೀರಿನ ಟ್ಯಾಂಕ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸಲಾಗುತ್ತಿತ್ತೆಂಬ ವಿಷಯವನ್ನು ಬಹಿರಂಗಪಡಿಸಿದ್ದನೆನ್ನಲಾಗಿದೆ.
ಆನಂತರ, ಪಾಲಕರು ನಾಲ್ಕನೆ ತರಗತಿಯಲ್ಲಿ ಕಲಿಯುವ ವಿದ್ಯಾರ್ಥಿಗಳಿಂದ ಈ ಬಗ್ಗೆ ವಿಚಾರಿಸಿ, ವಿಷಯವನ್ನು ದೃಢಪಡಿಸಿಕೊಂಡರು. ತಮ್ಮಿಂದ ಶಾಲೆಯ ಬಚ್ಚಲುಕೋಣೆ ಹಾಗೂ ನೀರಿನ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಲಾಗುತ್ತಿತ್ತೆಂದು ಮಕ್ಕಳು ಭಯಭೀತರಾಗಿ ಹೇಳುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶಾಲೆಯ ಮುಖ್ಯೋಪಾಧ್ಯಾಯಿನಿಯು ತಮಗೆ ಈ ಕೆಲಸ ಮಾಡುವಂತೆ ತಿಳಿಸಿದ್ದಾರೆಂದು ವಿಡಿಯೋದಲ್ಲಿ ಬಾಲಕರು ಹೇಳುತ್ತಿರುವುದು ಕಂಡುಬಂದಿದೆ. ತಮ್ಮನ್ನು ಯಾರಾದರೂ ನೋಡುತ್ತಿದ್ದಾರೆಯೇ ಎಂದು ಈ ಮಕ್ಕಳು ಭಯದಿಂದ ಆಗಾಗ್ಗೆ ಸುತ್ತಮುತ್ತ ನೋಡುತ್ತಿರುವುದನ್ನು ಕೂಡಾ ವಿಡಿಯೋದಲ್ಲಿ ಕಂಡುಬಂದಿದೆ.
ಶಾಲೆಯ ಬಚ್ಚಲು ಕೋಣೆ ಹಾಗೂ ನೀರಿನ ಟ್ಯಾಂಕ್ ಅನ್ನು ಹಲವು ಬಾರಿ ತಮ್ಮಿಂದ ಸ್ವಚ್ಚಗೊಳಿಸಲಾಗಿತ್ತೆಂಬ ವಿಷಯವನ್ನು ಈ ಬಾಲಕರು ಬಹಿರಂಗಪಡಿಸಿದ್ದಾರೆ.
ಘಟನೆಯನ್ನು ಖಂಡಿಸಿ, ಶಾಲೆಯ ಮುಂದೆ ದಲಿತ ವಿದ್ಯಾರ್ಥಿಗಳ ಪಾಲಕರು ಪ್ರತಿಭಟನೆ ನಡೆಸಿದ್ದಾರೆ. ಶಾಲೆಯ ಮುಖ್ಯೋಪಾಧ್ಯಾಯಿನಿಯನ್ನು ಬಂಧಿಸುವಂತೆಯೂ ಅವರು ಆಗ್ರಹಿಸಿದ್ದಾರೆ. ಇದೀಗ ತಲೆ ಮರೆಸಿಕೊಂಡಿರುವ ಮುಖ್ಯೋಪಾಧ್ಯಾಯಿನಿ ಗೀತಾರಾಣಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆಯ ಆನಂತರ ಗೀತಾರಾಣಿಯನ್ನು ಅಮಾನತುಗೊಳಿಸಲಾಗಿದೆ ಹಾಗೂ ಆಕೆಯ ವಿರುದ್ಧ ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.