ಗುಜರಾತ್ ವಿಧಾನಸಭಾ ಚುನಾವಣೆ : ಕೇವಲ ಓರ್ವ ಮತದಾರನಿಗಾಗಿ ಮತಗಟ್ಟೆ!

Update: 2022-12-01 16:29 GMT

ಹೊಸದಿಲ್ಲಿ,ಡಿ.1: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಸಾರ್ವತ್ರಿಕ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಭಾರತೀಯ ಚುನಾವಣಾ ಆಯೋಗವು ಗುರುವಾರ ನಡೆದ ಮೊದಲ ಹಂತದ ಮತದಾನಕ್ಕಾಗಿ ಕೇವಲ ಓರ್ವ ಮತದಾರನಿಗಾಗಿ ಮತಗಟ್ಟೆಯನ್ನು ಸ್ಥಾಪಿಸಿತ್ತು. ಗಿರ್ ದಟ್ಟಾರಣ್ಯದಲ್ಲಿಯ ಬಾನೆಜ್ ನಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆ ಮಹಂತ ಹರಿದಾಸಜಿ ಉದಾಸೀನ್ (Haridasaji Udaseen)ಅವರಿಗಾಗಿಯೇ ಮೀಸಲಾಗಿತ್ತು.

ಯಾವುದೇ ಮತದಾರ ಮತದಾನದಿಂದ ವಂಚಿತನಾಗದಂತೆ ನೋಡಿಕೊಳ್ಳಲು  ಚುನಾವಣಾ ಆಯೋಗವು ಹಲವಾರು ಪ್ರಯತ್ನಗಳನ್ನು ನಡೆಸಿದೆ. ಆಯೋಗವು ಸರಣಿ ಟ್ವೀಟ್ ಗಳಲ್ಲಿ  ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲ ಮತದಾರರಿಗಾಗಿ ಕಲ್ಪಿಸಿರುವ ಸೌಲಭ್ಯಗಳು,ದುರ್ಗಮ ಪ್ರದೇಶಗಳಲ್ಲಿಯ ಮತಗಟ್ಟೆಗಳಿಗೆ ಸಿಬ್ಬಂದಿಗಳು ತಲುಪುತ್ತಿರುವ ಚಿತ್ರಗಳನ್ನು ಪೋಸ್ಟ್ ಮಾಡಿದೆ.

ಅಮ್ರೇಲಿ ಜಿಲ್ಲೆಯ ಶಿಯಾಲಬೇಟ್ ಗ್ರಾಮವು ಅರಬಿ ಸಮುದ್ರದಿಂದ ಸುತ್ತುವರಿದಿದ್ದು,ದೋಣಿಯ ಮೂಲಕ ಮಾತ್ರ ಅಲ್ಲಿಗೆ ತಲುಪಬಹುದು. ಆಯೋಗವು ಈ ದ್ವೀಪದಲ್ಲಿ ಐದು ಮತಗಟ್ಟೆಗಳನ್ನು ಸ್ಥಾಪಿಸಿತ್ತು.

104 ಹರೆಯದ ರಾಮಜಿ ಭಾಯಿ ಅಂಚೆ ಮತದಾನದ ಸೌಲಭ್ಯವನ್ನು ಬಳಸಿಕೊಳ್ಳುವ ಬದಲು ಮತಗಟ್ಟೆಗೆ ಖುದ್ದಾಗಿ ಆಗಮಿಸಿ ಮತದಾನ ಮಾಡಿದ ಚಿತ್ರವನ್ನು ಆಯೋಗವು ಟ್ವೀಟಿಸಿದೆ.

ಜುನಾಗಡ ಜಿಲ್ಲೆಯ ಮತಗಟ್ಟೆಯೊಂದರಲ್ಲಿ ವೈದ್ಯಕೀಯ ತಪಾಸಣೆಗೆ ಅವಕಾಶ ಕಲ್ಪಿಸಲಾಗಿದ್ದು,ಇದು ಭಾರತದಲ್ಲಿ ಇಂತಹ  ಮೊದಲ ವ್ಯವಸ್ಥೆಯಾಗಿದೆ ಎಂದು ಆಯೋಗವು ತಿಳಿಸಿದೆ.

ಸುರೇಂದ್ರನಗರ ಜಿಲ್ಲೆಯ ಮತಗಟ್ಟೆಯೊಂದರಲ್ಲಿ ಅಂಧ ಮತದಾರರು ಮತ ಚಲಾಯಿಸುತ್ತಿರುವುದನ್ನು ಒಂದು ಚಿತ್ರವು ತೋರಿಸಿದೆ.

ಗುಜರಾತ್ ವಿಧಾನಸಭಾ ಚುನಾವಣೆಯ ಎರಡನೇ ಮತ್ತು ಅಂತಿಮ ಹಂತದ ಮತದಾನ ಡಿ.5ರಂದು ನಡೆಯಲಿದ್ದು,ಡಿ.8ರಂದು ಮತಗಳ ಎಣಿಕೆ ನಡೆಯಲಿದೆ.

Similar News