ರಾಜಸ್ಥಾನ:1.9 ಕೋ.ರೂ.ವಿಮೆ ಹಣಕ್ಕಾಗಿ ಪತ್ನಿಯನ್ನು ಕೊಂದ ವ್ಯಕ್ತಿಯ ಬಂಧನ

Update: 2022-12-01 16:57 GMT

ಜೈಪುರ,ಡಿ.1: 1.90 ಕೋ.ರೂ.ವಿಮೆಹಣದ ಆಸೆಗಾಗಿ ತನ್ನ ಪತ್ನಿಯನ್ನೇ ಸುಪಾರಿ ನೀಡಿ ಹಲ್ಲೆ ಗೈದಿದ್ದ  ವ್ಯಕ್ತಿಯನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.

ಮಹೇಶಚಂದ್(Mahesh Chand) ಬಂಧಿತ ಆರೋಪಿ. ಅ.5ರಂದು ನಸುಕಿನ 4:45ರ ಸುಮಾರಿಗೆ ಆತನ ಪತ್ನಿ ಶಾಲು ತನ್ನ ಸೋದರ ಸಂಬಂಧಿ ರಾಜು ಜೊತೆಗೆ ಬೈಕಿನಲ್ಲಿ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ರೌಡಿ ಶೀಟರ್ ಮಹೇಶ ಸಿಂಗ್ ರಾಠೋಡ್(Mahesh Singh Rathore) ಮತ್ತು ಇತರರು ತಮ್ಮ ಎಸ್ಯುವಿ ವಾಹನವನ್ನು ವಾಹನಕ್ಕೆ ಡಿಕ್ಕಿ ಹೊಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಶಾಲು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ ರಾಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ.

ಅದೊಂದು ರಸ್ತೆ ಅಪಘಾತದಂತೆ ಕಂಡುಬಂದಿದ್ದು,ಶಾಲು ಮನೆಯವರೂ ಹಾಗೆಯೇ ಭಾವಿಸಿದ್ದರು. ಆದರೆ ಪೊಲೀಸರ ತನಿಖೆಯಲ್ಲಿ ಮಹೇಶಚಂದ್ ತನ್ನ ಪತ್ನಿಯ ವಿಮೆಹಣಕ್ಕಾಗಿ ಆಕೆಯನ್ನು ಕೊಲ್ಲಲು ಸಂಚು ರೂಪಿಸಿದ್ದ ಎನ್ನುವುದು ಬಹಿರಂಗಗೊಂಡಿದೆ.

ಮಹೇಶಚಂದ್ ಶಾಲು ಹೆಸರಿಗೆ 40 ವರ್ಷಗಳ ಅವಧಿಗೆ ವಿಮೆಯನ್ನು ಮಾಡಿಸಿದ್ದ. ಸಹಜ ಮರಣವಾದರೆ ಒಂದು ಕೋ.ರೂ.ಮತ್ತು ಅಪಘಾತದಲ್ಲಿ ಮೃತಪಟ್ಟರೆ 1.9 ಕೋ.ರೂ.ವಿಮೆಹಣ ದೊರೆಯುತ್ತಿತ್ತು ಎಂದು ಪೊಲೀಸರು ತಿಳಿಸಿದರು.

ಶಾಲು ಹತ್ಯೆಗಾಗಿ ಮಹೇಶಚಂದ್ ರಾಠೋಡ್ಗೆ 10 ಲ.ರೂ.ಗಳಿಗೆ ಸುಪಾರಿ ನೀಡಿದ್ದು,ಮುಂಗಡವಾಗಿ 5.5 ಲ.ರೂ.ಗಳನ್ನು ಪಾವತಿಸಿದ್ದ. ಶಾಲು  ಹತ್ಯೆಗಾಗಿ ರಾಠೋಡ್ ಇತರರನ್ನು ಭಾಗಿಯಾಗಿಸಿಕೊಂಡಿದ್ದ.

ಮಹೇಶಚಂದ್ ಮತ್ತು ಶಾಲು 2015ರಲ್ಲಿ ಮದುವೆಯಾಗಿದ್ದು, ಓರ್ವ ಪುತ್ರಿಯಿದ್ದಾಳೆ. ವಿವಾಹದ ಎರಡು ಗಳ ಬಳಿಕ ಅವರ ನಡುವೆ ಜಗಳಗಳು ಆರಂಭವಾಗಿದ್ದು,ಶಾಲು ತನ್ನ ತವರುಮನೆಯಲ್ಲಿ ವಾಸಿಸತೊಡಗಿದ್ದಳು. ಆಕೆ 2019ರಲ್ಲಿ ಮಹೇಶಚಂದ್ ವಿರುದ್ಧ ಕೌಟುಂಬಿಕ ಹಿಂಸೆ ಪ್ರಕರಣವನ್ನೂ ದಾಖಲಿಸಿದ್ದಳು ಎಂದು ಪೊಲೀಸರು ತಿಳಿಸಿದರು.

ಇತ್ತೀಚಿಗೆ ಶಾಲು ಹೆಸರಿನಲ್ಲಿ ವಿಮೆ ಮಾಡಿಸಿದ್ದ ಮಹೇಶಚಂದ್, ಬಳಿಕ ತಾನೊಂದು ಹರಕೆಯನ್ನು ಹೇಳಿಕೊಂಡಿದ್ದು,ಅದು ಈಡೇರುವಂತಾಗಲು ಸತತ 11 ದಿನಗಳ ಕಾಲ ಯಾರಿಗೂ ತಿಳಿಸದೆ ರಾಜು ಜೊತೆ ಬೈಕಿನಲ್ಲಿ ಹನುಮಾನ ದೇವಸ್ಥಾನಕ್ಕೆ ತೆರಳಿ ಪೂಜೆ ಮಾಡಿಸುವಂತೆ ಸೂಚಿಸಿದ್ದ. ತನ್ನ ಹರಕೆಯು ಈಡೇರಿದರೆ ಆಕೆಗೆ ಮನೆಯೊಂದನ್ನು ಕೊಡಿಸುವುದಾಗಿ ಭರವಸೆಯನ್ನೂ ನೀಡಿದ್ದ. ಅದರಂತೆ ಶಾಲು ದೇವಸ್ಥಾನಕ್ಕೆ ಭೇಟಿ ನೀಡಲು ಆರಂಭಿಸಿದ್ದಳು.

ರಾಠೋಡ್ ತನ್ನ ವಾಹನವನ್ನು ಬೈಕಿಗೆ ಡಿಕ್ಕಿ ಹೊಡೆಸಿದಾಗ ಮಹೇಶಚಂದ್ ಬೈಕಿನಲ್ಲಿ ಅದನ್ನು ಹಿಂಬಾಲಿಸುತ್ತಿದ್ದ. ಅಪಘಾತದ ಬಳಿಕ ಆತ ಅಲ್ಲಿಂದ ವಾಪಸಾಗಿದ್ದ.

ರಾಠೋಡ್,ಎಸ್ಯುವಿ ವಾಹನದ ಮಾಲಿಕ ರಾಕೇಶ ಸಿಂಗ್ ಮತ್ತು ಸೋನು ಅವರನ್ನೂ ಬಂಧಿಸಲಾಗಿದೆ. ಇತರ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

Similar News