112 ವರ್ಷಗಳ ದಾಖಲೆಯನ್ನು ಮುರಿದ ಇಂಗ್ಲೆಂಡ್

ಪಾಕ್ ವಿರುದ್ಧದ ಟೆಸ್ಟ್ ನ ಮೊದಲ ದಿನ 506 ರನ್ ಗಳಿಸಿದ ಪ್ರವಾಸಿಗರು

Update: 2022-12-01 17:38 GMT

ರಾವಲ್ಪಿಂಡಿ, ಡಿ. 1: ರಾವಲ್ಪಿಂಡಿಯಲ್ಲಿ ಗುರುವಾರ ಆರಂಭಗೊಂಡ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ನ ಮೊದಲ ದಿನ 506 ರನ್ ಗಳ ಬೃಹತ್ ಮೊತ್ತವನ್ನು ಕಲೆಹಾಕಿರುವ ಇಂಗ್ಲೆಂಡ್ ದಾಖಲೆ ನಿರ್ಮಿಸಿದೆ.

ಟೆಸ್ಟೊಂದರ ಮೊದಲ ದಿನ ಅತಿ ಹೆಚ್ಚು ರನ್ ಗಳು ದಾಖಲಾದ ಹಿಂದಿನ ದಾಖಲೆ 112 ವರ್ಷಗಳ ಹಿಂದೆ ನಿರ್ಮಾಣಗೊಂಡಿದೆ. 1910ರ ಡಿಸೆಂಬರ್ ನಲ್ಲಿ  ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕ ತಂಡಗಳ ನಡುವೆ ನಡೆದ ಪಂದ್ಯದಲಿ ಆ ದಾಖಲೆ ನಿರ್ಮಾಣವಾಗಿತ್ತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ನಿರ್ಧರಿಸಿದ ಬಳಿಕ, ಅಗ್ರ ಕ್ರಮಾಂಕದ ಆಟಗಾರರಾದ ಝ್ಯಾಕ್ ಕ್ರಾಲಿ (122), ಬೆನ್ ಡಕೆಟ್ (107) ಮತ್ತು ಓಲೀ ಪೋಪ್ (108) ಶತಕಗಳನ್ನು ಸಿಡಿಸಿದರು.

ಆರಂಭಿಕ ದಿನದಂದೇ ಶತಕ ಸಿಡಿಸಿದ ಇಂಗ್ಲೆಂಡ್ ನ ನಾಲ್ಕನೇ ಆಟಗಾರ ಹ್ಯಾರಿ ಬ್ರೂಕ್. ಅವರು 101 ರನ್ ಗಳಿಸಿ ಕ್ರೀಸ್ ನಲ್ಲಿ ಉಳಿದಿದ್ದಾರೆ. ಇದರೊಂದಿಗೆ, ಮೊದಲ ದಿನದ ಆಟ ಮುಗಿದಾಗ ಇಂಗ್ಲೆಂಡ್ ತನ್ನ ಮೊದಲ ಇನಿಂಗ್ಸ್ನಲ್ಲಿ 4 ವಿಕೆಟ್ ಗಳ ನಷ್ಟಕ್ಕೆ 506 ರನ್ ಗಳನ್ನು ಗಳಿಸಿತು.

ರಾವಲ್ಪಿಂಡಿಯ ಸಪಾಟು ಪಿಚ್ ನಲ್ಲಿ, ಇಂಗ್ಲೆಂಡ್ ಬ್ಯಾಟರ್ ಗಳ ರನ್ ಹೊಳೆಗೆ ತಡೆ ಹಾಕಲು ಪಾಕಿಸ್ತಾನದ ಬೌಲರ್ ಗಳು ಪ್ರಯಾಸಪಟ್ಟರು. ಲೆಗ್ ಸ್ಪಿನ್ನರ್ ಝಹೀದ್ ಮಹ್ಮೂದ್ 23 ಒವರ್   ಗಳಲ್ಲಿ 160 ರನ್ಗಳನ್ನು ಬಿಟ್ಟುಕೊಟ್ಟರು. ಅದೇ ವೇಳೆ, ಅವರು ಎರಡು ವಿಕೆಟ್ ಗಳನ್ನೂ ಉರುಳಿಸಿದರು.

ದಿನದಾಟದ ಅಂತ್ಯಕ್ಕೆ ಬ್ರೂಕ್ ಮತ್ತು ಸ್ಟೋಕ್ಸ್ (34) ಕ್ರೀಸ್ ನಲ್ಲಿದ್ದರು.

Similar News