ರಶ್ಯ ವಿರೋಧಿ ಒಕ್ಕೂಟಕ್ಕೆ ಭಾರತವನ್ನು ಸೆಳೆಯಲು ನೇಟೊ ಪ್ರಯತ್ನ: ರಶ್ಯ ಆರೋಪ

Update: 2022-12-01 17:48 GMT

ಮಾಸ್ಕೊ, ಡಿ.1: ರಶ್ಯ ವಿರೋಧಿ ಮತ್ತು ಚೀನೀ ವಿರೋಧಿ ಒಕ್ಕೂಟಕ್ಕೆ ಭಾರತವನ್ನು ಸೆಳೆಯಲು ನೇಟೊ ಪ್ರಯತ್ನಿಸುತ್ತಿದೆ. ಈ ಮೂಲಕ ರಶ್ಯದ ಪ್ರಭಾವವನ್ನು ಕನಿಷ್ಟಗೊಳಿಸುವುದು ಪಾಶ್ಚಿಮಾತ್ಯ ದೇಶಗಳ ಉದ್ದೇಶವಾಗಿದೆ ಎಂದು ರಶ್ಯದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ಗುರುವಾರ ಪ್ರತಿಪಾದಿಸಿದ್ದಾರೆ.

ನೇಟೊ ಚೀನಾದ ಬಳಿ ಉದ್ವಿಗ್ನತೆಯನ್ನು ಹೆಚ್ಚಿಸಿರುವುದು ರಶ್ಯಕ್ಕೆ ಅಪಾಯ ತಂದೊಡ್ಡಿದೆ. ಈ ಹಿಂದೆ ಉಕ್ರೇನ್‌ನಲ್ಲಿ ಮಾಡಿದಂತೆ ಈಗ ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಉದ್ವಿಗ್ನತೆಗೆ ನೇಟೊ ಪ್ರಚೋದನೆ ನೀಡುತ್ತಿದೆ. ತೈವಾನ್ ಮತ್ತು ತೈವಾನ್ ಜಲಸಂಧಿಯಲ್ಲಿನ ಬೆಳವಣಿಗೆಯನ್ನು ಚೀನಾ ಅತ್ಯಂತ ಗಂಭೀರವಾಗಿ ಪರಿಗಣಿಸಿರುವುದು ನಮಗೆ ತಿಳಿದಿದೆ. ಈ ವಲಯದಲ್ಲಿ ನೇಟೊ ಬೆಂಕಿಯೊಂದಿಗೆ ಸರಸವಾಡುತ್ತಿರುವುದು ಇಲ್ಲಿಗೆ ಅತೀ ಹತ್ತಿರದಲ್ಲಿರುವ ರಶ್ಯಕ್ಕೆ ಅಪಾಯ ತಂದೊಡ್ಡಿದೆ. ಈ ಕಾರಣದಿಂದಲೇ ರಶ್ಯವು ಚೀನಾದೊಂದಿಗಿನ ಮಿಲಿಟರಿ ಸಹಕಾರ ಸಂಬಂಧ ಹೆಚ್ಚಿಸಿದೆ ಮತ್ತು ಜಂಟಿ ಸಮರಾಭ್ಯಾಸ ನಡೆಸುತ್ತಿದೆ. ಅಮೆರಿಕದ ನೇತೃತ್ವದಲ್ಲಿ ನೇಟೊ ಸದಸ್ಯರು ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಸ್ಫೋಟಕ ಪರಿಸ್ಥಿತಿಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದವರು ಹೇಳಿದ್ದಾರೆ.

 ಉಕ್ರೇನ್ ಮೂಲಕ ರಶ್ಯದ ಅಸ್ತಿತ್ವಕ್ಕೇ ಅಮೆರಿಕ ಬೆದರಿಕೆ ಒಡ್ಡುತ್ತಿದೆ. ಅಮೆರಿಕದೊಂದಿಗಿನ ಸಂಪರ್ಕದಿಂದ ರಶ್ಯ ಎಂದಿಗೂ ದೂರ ಸರಿದಿಲ್ಲ, ಆದರೆ ಈ ವಿಷಯದಲ್ಲಿ ಅಮೆರಿಕದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂದು ಲಾವ್ರೋ ಆರೋಪಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ನೇಟೊ, ರಶ್ಯದಿಂದ ಉಕ್ರೇನ್‌ಗೆ ಮಾತ್ರವಲ್ಲ, ನೆರೆಯ ದೇಶಗಳಾದ ಮೊಲ್ದೋವಾ, ಜಾರ್ಜಿಯಾ ಹಾಗೂ ಬೋಸ್ನಿಯಾ-ಹರ್ಝೆಗೊವಿನಾಗಳಿಗೂ ಬೆದರಿಕೆಯಿದೆ ಎಂದಿದೆ. ಉಕ್ರೇನ್‌ನ ಪ್ರಜೆಗಳನ್ನು ವಿಭಜಿಸಿ, ಸರಕಾರದ ವಿರುದ್ಧ ಎತ್ತಿಕಟ್ಟುವ ತಂತ್ರವನ್ನು ರಶ್ಯ ಅಧ್ಯಕ್ಷ ಪುಟಿನ್ ಹೆಣೆದಿದ್ದು, ಇದು ಅವರಿಗೇ ತಿರುಗುಬಾಣವಾಗಲಿದೆ ಎಂದು ಅಮೆರಿಕ ಹೇಳಿದೆ.

Similar News