ಸುರತ್ಕಲ್‌ ಟೋಲ್‌ಗೇಟ್‌ ಹೋರಾಟ ಸಮಿತಿ, ಸಮಾನ ಮನಸ್ಕ ಸಂಘಟನೆಗಳು ನಡೆಸುತ್ತಿದ್ದ ಆಹೋರಾತ್ರಿ ಧರಣಿ ಸಮಾರೋಪ

Update: 2022-12-01 18:14 GMT

ಸುರತ್ಕಲ್‌, ಡಿ.1: ಇಲ್ಲಿನ ಎನ್‌ಐಟಿಕೆ ಟೋಲ್‌ಗೇಟ್‌ ತೆರವಿಗೆ ಆಗ್ರಹಿಸಿ ಸುರತ್ಕಲ್‌ ಟೋಲ್‌ಗೇಟ್‌ ಹೋರಾಟ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳು ನಡೆಸುತ್ತಿದ್ದ ಆಹೋರಾತ್ರಿ ಧರಣಿ ಗುರುವಾರ ಟೋಲ್‌ಗೇಟ್‌ ಸಮೀಪದ ಧರಣಿ ಮಂಟಪದಲ್ಲಿ ಸಮಾರೋಪಗೊಂಡಿತು.

ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ, ಈ ಹೋರಾಟದ ಮೂಲಕ ಸರಕಾರ, ಜಿಲ್ಲಾಡಳಿತ, ಜನಪ್ರತಿನಿಧಿಗಳಿಗೆ ತುಳು ನಾಡಿದ ಜನತೆ ಮನಸ್ಸು ಮಾಡಿದರೆ ಯಾವ ರೀತಿಯಲ್ಲಿ ಬಿಸಿ ಮುಟ್ಟಿಸುತ್ತಾರೆ ಎಂದು ತಿಳಿಸಿಕೊಟ್ಟಿದೆ. ಈ ಹೋರಾಟ ಕೊನೆಯಲ್ಲ. ಇದು ಕೇವಲ ಟೋಲ್‌ಗೇಟ್‌ ತೆರವಿನ ಹೋರಾಟದ ಕೊನೆಯಷ್ಟೇ ಎಂದರು.

ಬಿಜೆಪಿ ಮಂಗಳೂರನ್ನು ಕೋಮುವಾದದ ಪ್ರಯೋಗ ಶಾಲೆಯಾಗಿ ಮಾಡಿದೆ. ಅದನ್ನು ಮುಚ್ಚುವ ಹೋರಾಟದ ಆರಂಭ. ಇಲ್ಲಿನ  ಬಹುದೊಡ್ಡ ಸಮಸ್ಯೆಯಾಗಿರುವ ನಿರುದ್ಯೋಗದ ಸಮಸ್ಯೆಯನ್ನು ಜಾತಿ ಧರ್ಮದ ಹೆಸರಿನಲ್ಲಿ ಮೂಲೆ ಗುಂಪು ಮಾಡಲಾಗುತ್ತಿದೆ. ಎಲ್ಲಾ ಸಮಸ್ಯೆಗಳನ್ನು ಪ್ರಶ್ನಿಸಿದರೂ ಧರ್ಮದ ರಾಜಕಾರಣ ಮಾಡಲಾಗುತ್ತಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಇವರ ಧರ ರಾಜಕಾರಣದ ವಿರುದ್ಧ ಖಾರವಾಗಿ ನಿರ್ಧಾರ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಮುಂದಿನ ದಿನಗಳಲ್ಲಿ ನಮ್ಮ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟಗಳನ್ನು ಸಂಘಟಿಸಬೇಕಿದೆ ಎಂದು ರಮಾನಾಥ ರೈ ನುಡಿದರು.

ಬಳಿಕ ಮಾತನಾಡಿದ ಹೋರಾಟ ಸಮಿತಿಯ ಸಂಚಾಲಕ ಮುನೀರ್‌ ಕಾಟಿಪಳ್ಳ, ಬಿಜೆಪಿ ನಾಯಕರಿಗೆ ತುಳುನಾಡಿನ ಜನರ ಸಾಮರ್ಥ್ಯ ಈ ಹೋರಾಟ ಮೂಲಕ ತಿಳಿಸಿದ್ದಾರೆ. ಬಿಜೆಪಿಯ ಧರ್ಮ ರಾಜಕಾರಣದಿಂದ ಜನಕೇಂದ್ರೀಕೃತ ರಾಜಕಾರಣದತ್ತ ಜನರನ್ನು ತರುವಲ್ಲಿ ಟೋಲ್‌ಗೇಟ್‌ ವಿರುದ್ಧದ ಹೋರಾಟ ಯಶಸ್ವಿಯಾಗಿದೆ. ಇದು ಮುಂದಿನ ದಿನಗಳಲ್ಲೂ ಮುಂದುವರಿಲಿದೆ ಎಂದು ನುಡಿದರು. ಇದು ಧರಣಿ ಮಂಟಪವಲ್ಲ. ಬಸವಣ್ಣನವರ ಅನುಭವ ಮಂಟಪವಾಗಿ ಮಾರ್ಪಟ್ಟಿದೆ. ಇಲ್ಲಿ ಅನೇಕರು ವಿವಿಧ ರೀತಿಯ ಅನುಭವಗಳನ್ನು ವಿವಿಧ ಸತ್ಯಗಳನ್ನು ಅರಿತುಕೊಂಡಿದ್ದಾರೆ. ಹೋರಾಟ ಸಮಿತಿಯ ಈ ಧರಣಿ ಮಂಟಪದಲ್ಲಿ ಹೋರಾಟ ಆರಂಭವಾದಾಗಿನಿಂದ ಬಬಿಜೆಪಿಯ ಒಳಗಿನ ಸತ್ಯಗಳು, ಅದರ ಶಾಸಕರು, ಸಂಸದರ ಮನೋಭಾವನೆಗಳನ್ನು ಜನರು ಅರಿತುಕೊಳ್ಳಲು ಸಾಧ್ಯಾವಾಗಿದೆ ಎಂದು ಅಭಿಪ್ರಾಯಿಸಿದರು.

ಇದೇ ವೇಳೆ ಮಾಜಿ ಸಚಿವರಾದ ವಿನಯಕುಮಾರ್‌ ಸೊರಕೆ, ಹೋರಾಟ ಸಮಿತಿಯ ಸಂಚಾಲಕ ಮುನೀರ್‌ ಕಾಟಿಪಳ್ಳ ಹಾಗೂ ಸಮಾನ ಮನಸ್ಕ ಸಂಘಟನೆಗಳ ಮುಖಂಡರು ಟೋಲ್‌ ಗೇಟ್‌ ಮಾದರಿಯ ಕೇಕ್ ಕಟ್‌ ಮಾಡುವ ಮೂಲಕ ಸಂಭ್ರಮಾಚರಣೆಗೆ ಚಾಲನೆ ನೀಡಿದರು.‌

ಈ ಸಂದರ್ಭ ಮಾಜಿ ಸಚಿವ ಮೊಯ್ದಿನ್‌ ಬಾವ, ಮಾಜಿ ಎಂಎಲ್ಸಿ ಐವಾನ್‌ ಡಿಸೋಜಾ, ಮಾಜಿ ಮೇಯರ್‌ ಅಶ್ರಫ್‌, ದಿನೇಶ್ ಹೆಗ್ಡೆ ಉಳೆಪಾಡಿ, ಪ್ರತಿಭಾ ಕುಳಾಯಿ, ಪುರುಷೋತ್ತಮ ಚಿತ್ರಾಪುರ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ, ಸುನಿಲ್‌ ಕುಮಾರ್‌ ಬಜಾಲ್‌, ಎಂ.ಜಿ. ಹೆಗ್ಡೆ, ಶೇಖರ ಹೆಜಮಾಡಿ, ಸಿರಾಜ್‌ ಮೋನು, ಸುಶೀಲ್‌ ಕೊರಾಹ್ನ, ಮುಹಮ್ಮದ್‌ ಕುಂಞಿ,  ಯೋಗೀಶ್‌ ಶೆಟ್ಟಿ, ಸುಮತಿ ಹೆಗಡೆ, ಎಂ.ಬಿ. ಭಟ್‌, ಹುಸೈನ್ ಕಾಟಿಪಳ್ಳ, ಶೇಖರ್ ಸಿಪಿಐಎಂ, ಸಂತೊಶ್ ಬಜಾಲ್ , ಮೂಸಬ್ಬ ಪಕ್ಷಿಕೆರೆ, ಕಿಶನ್ ಹೆಗ್ಡೆ ಕೊಲಿಕೆಬೈಲು, ಮಂಜುಳಾ ನಾಯಕ್, ದಿನೇಶ್ ಕುಂಪಲ, ಮಾಜಿ ಉಪಮೇಯರ್ ಮುಹಮ್ಮದ್, ಬಶೀರ್‌ ಬೈಕಂಪಾಡಿ ಮೊದಲಾದವರು ಉಪಸ್ಥಿತರಿದ್ದರು.

"ಸುರತ್ಕಲ್‌ ಟೋಲ್‌ಗೇಟನ್ನು ಮುಚ್ಚಿ ಇಲ್ಲಿನ ಸುಂಕವನ್ನು ಹೆಜಮಾಡಿಯಲ್ಲಿ ಹೆಚ್ಚುವರಿ ಹಣ ಪಡೆದರೆ ಹೆಜಮಾಡಿ ಟೋಲ್‌ಗೇಟ್‌ನ ಜೊತೆಗೆ ಜನಪ್ರತಿನಿಧಿಗಳೂ ಸೀಟು ಬಿಟ್ಟು ಸಮುದ್ರ ಸೇರಬೇಕಾಗಬಹುದು".

* ಮುನೀರ್‌ ಕಾಟಿಪಳ್ಳ, ಸುರತ್ಕಲ್‌ ಟೋಲ್‌ಗೇಟ್‌ ಹೋರಾಟ ಸಮಿತಿಯ ಸಂಚಾಲಕ

Similar News