ಬ್ರಿಟನ್ ಅರಮನೆಯಲ್ಲಿ ಕಪ್ಪು ಮಹಿಳೆಗೆ ನಿಂದನೆ: ವ್ಯಾಪಕ ಟೀಕೆ

Update: 2022-12-01 18:21 GMT

ಲಂಡನ್, ಡಿ.1: ಬ್ರಿಟನ್‌ನ ಬಕಿಂಗ್ಹಾಮ್ ಅರಮನೆಯಲ್ಲಿ ರಾಜಕುಟುಂಬ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಕಪ್ಪು ಮಹಿಳೆಯೊಬ್ಬರನ್ನು ರಾಜಕುಮಾರ ವಿಲಿಯಮ್ಸ್‌ನ ಸಹಾಯಕಿ ಪದೇ ಪದೇ ‘ನೀವು ನಿಜವಾಗಿ ಎಲ್ಲಿಂದ ಬಂದವರು ? ಎಂದು ಪ್ರಶ್ನಿಸಿ ಮನನೋಯಿಸಿದ ಘಟನೆ ವಿವಾದಕ್ಕೆ ಕಾರಣವಾಗಿದೆ.

ಆಫ್ರಿಕನ್ ಪರಂಪರೆಯ, ವೆಸ್ಟಿಂಡೀಸ್ ಮೂಲದ ಬ್ರಿಟನ್ ಪ್ರಜೆ ಎನ್‌ಗೋಝಿ ಫುಲಾನಿ ತಮಗಾದ ಅವಮಾನವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅರಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ತನ್ನ ಬಳಿ ಬಂದ ರಾಜಕುಟುಂಬದ ಸಹಾಯಕಿ ‘ಆಫ್ರಿಕಾದ ಯಾವ ಭಾಗದಿಂದ ಬಂದವರು ನೀವು? ಎಂದು ಪದೇ ಪದೇ ಪ್ರಶ್ನಿಸಿದಾಗ ಅವಮಾನ ಮತ್ತು ಮುಜುಗುರಕ್ಕೆ ಒಳಗಾದೆ. ಬಳಿಕ ತಾನೊಬ್ಬ ಬ್ರಿಟಿಷ್ ಪ್ರಜೆಯೆಂದು ಉತ್ತರಿಸಿರುವುದಾಗಿ ಫುಲಾನಿ ಹೇಳಿದ್ದಾರೆ. ಈ ಬಗ್ಗೆ ಬಳಕೆದಾರರು ವ್ಯಾಪಕ ಆಕ್ರೋಶ ಮತ್ತು ಟೀಕೆ ವ್ಯಕ್ತಪಡಿಸಿದ್ದಾರೆ.

ಸಹಾಯಕಿಯನ್ನು 83 ವರ್ಷದ ಲೇಡಿ ಹಸ್ಸಿ ಎಂದು ಗುರುತಿಸಲಾಗಿದ್ದು ಬಳಿಕ ಅವರು ತನ್ನ ವರ್ತನೆಗೆ ಕ್ಷಮೆ ಯಾಚಿಸಿ, ರಾಜಮನೆತನದ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಅರಮನೆಯ ವಕ್ತಾರರು ಹೇಳಿಕೆ ನೀಡಿದ್ದಾರೆ.

Similar News