ಉತ್ತರ ಕನ್ನಡ ಜಿಲ್ಲೆಯಲ್ಲಿ 92,516 ಮತದಾರರ ಹೆಸರಿಗೆ ಕತ್ತರಿ: ಭೀಮಣ್ಣ ನಾಯ್ಕ ಆರೋಪ

"ಭಟ್ಕಳ ವಿಧಾನಸಭಾ ಕ್ಷೇತ್ರವೊಂದರಲ್ಲೇ 18,396 ಮತದಾರರ ಹೆಸರು ಮಾಯ!"

Update: 2022-12-02 07:11 GMT

ಭಟ್ಕಳ, ಡಿ.2: ಉತ್ತರ ಕನ್ನಡ ಜಿಲ್ಲೆಯಲ್ಲಿ 92,516 ಮತದಾರರ ಹೆಸರನ್ನು ಚುನಾವಣಾ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಭಟ್ಕಳ ವಿಧಾನಸಭಾ ಕ್ಷೇತ್ರವೊಂದರಲ್ಲೇ 18,396 ಮತದಾರರ ಹೆಸರಿಗೆ ಕತ್ತರಿ ಹಾಕಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಆರೋಪಿಸಿದ್ದಾರೆ.

ಭಟ್ಕಳದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇನ್ನು ಮೂರ್ನಾಲ್ಕು ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಯವರು ಹೊಲಸು ರಾಜಕಾರಣ ಮಾಡುತ್ತಿದ್ದು, ಜಾತ್ಯತೀತ ಮತದಾರರ ಹೆಸರನ್ನು ಅಳಿಸಿ ಹಾಕಲಾಗುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಜನರನ್ನು ಸೆಳೆಯುವ ಬದಲು ಬಿಜೆಪಿ ವಾಮ ಮಾರ್ಗ ಅನುಸರಿಸುತ್ತಿದೆ ಎಂದು ಹೇಳಿದರು.

ಮತದಾರರ ಪಟ್ಟಿಯನ್ನು ಪ್ರದರ್ಶಿಸಿ ಮಾತನಾಡಿದ ಭೀಮಣ್ಣ ನಾಯ್ಕ, ರಾಜ್ಯಾದ್ಯಂತ ಮತದಾರರ ಪಟ್ಟಿ ಕಾಂಗ್ರಸ್ ಬಳಿ ಇದ್ದು, ರಾಜ್ಯಾದ್ಯಂತ ಎಷ್ಟು ಮತದಾರರ ಹೆಸರು ಡಿಲೀಟ್ ಆಗಿದೆ ಎಂಬ ಸಂಪೂರ್ಣ ಮಾಹಿತಿ ಪಡೆಯಲಾಗಿದೆ ಎಂದರು.

 ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರವಾರದಲ್ಲಿ ಅತಿ ಹೆಚ್ಚು ಹೆಸರು ಡಿಲೀಟ್ ಆಗಿದ್ದು, ಭಟ್ಕಳ ಎರಡನೇ ಸ್ಥಾನದಲ್ಲಿದೆ. ಕಾರವಾರದಿಂದ 19,758, ಭಟ್ಕಳದಿಂದ 18,396, ಕುಮಟಾದಿಂದ 15,375, ಶಿರಸಿಯಿಂದ 13,624, ಹಳಿಯಾಳದಿಂದ 13,537 ಮತ್ತು ಯಲ್ಲಾಪುರದಿಂದ 11,826 ಮಂದಿಯ ಹೆಸರು ಮತದಾರರ ಪಟ್ಟಿಯಿಂದ ಮಾಯವಾಗಿದೆ ಎಂದವರು ತಿಳಿಸಿದರು.

ಜಿಲ್ಲಾದ್ಯಂತ ಕಾಂಗ್ರೆಸ್ ಕಾರ್ಯಕರ್ತರಿಗೆ ಮನೆ ಮನೆಗೆ ತೆರಳಿ ಮತದಾರರ ವಿವರ ಸಂಗ್ರಹಿಸಲು ಸೂಚನೆ ನೀಡಲಾಗಿದೆ. ಯಾವ ಕಾರಣಕ್ಕೆ ಹೆಸರು ಅಳಿಸಲಾಗಿದೆ ಎಂಬ ಮಾಹಿತಿ ಪಡೆದು ಪ್ರಕ್ರಿಯೆ ಆರಂಭಿಸಿ, ಮತದಾರರ ಪಟ್ಟಿಯಿಂದ ಕಣ್ಮರೆಯಾದವರ ಹೆಸರನ್ನು ಮತ್ತೆ ಮತದಾರರ ಪಟ್ಟಿಗೆ ನಮೂದಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

 ಸುದ್ದಿಗೋಷ್ಠಿಯಲ್ಲಿ ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಮಾಜಿ ಶಾಸಕ ಮಾಂಕಾಳ್ ವೈದ್ಯ, ಕಾಂಗ್ರೆಸ್ ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾಧ್ಯಕ್ಷ ಅಬ್ದುಲ್ ಮಜೀದ್ ಮೊದಲಾದವರು ಉಪಸ್ಥಿತರಿದ್ದರು.

Similar News