ಮಹಿಳೆಯರಿಗಿಲ್ಲದ ಪ್ರತ್ಯೇಕ ಮತದಾನ ವ್ಯವಸ್ಥೆ: ಚುನಾವಣೆ ಬಹಿಷ್ಕರಿಸಿದ ಗ್ರಾಮಸ್ಥರು

Update: 2022-12-02 12:49 GMT

ಅಹಮದಾಬಾದ್: ಮಹಿಳೆಯರಿಗಾಗಿ ಸಾಂಪ್ರದಾಯಿಕ ಪ್ರತ್ಯೇಕ ಮತಗಟ್ಟೆ ಸ್ಥಾಪಿಸದೆ ಅದನ್ನು ಸಾಮಾನ್ಯ ಮತಗಟ್ಟೆಯಾಗಿ ಪರಿವರ್ತಿಸಿದ್ದರಿಂದ ಕ್ರೋಧಗೊಂಡ ಗ್ರಾಮಸ್ಥರು, ಜಾಮ್ ನಗರ ಜಿಲ್ಲೆಯ ಜಮ್ಜೋಧ್ ಪುರ ತಾಲ್ಲೂಕಿನ ಧ್ರಾಫಾದಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಒಂದೂ ಮತ ಚಲಾವಣೆ ಮಾಡದೆ ಚುನಾವಣೆ ಬಹಿಷ್ಕರಿಸಿದ್ದಾರೆ(boycotts polls). ಈ ಮತಗಟ್ಟೆಯಲ್ಲಿ ಸುಮಾರು 2100 ಮತದಾರರಿದ್ದಾರೆ ಎಂದು indianexpress.com ವರದಿ ಮಾಡಿದೆ.

ಧ್ರಾಫಾದಲ್ಲಿ ಸುಮಾರು 1200 ಪುರುಷ ಮತದಾರರು ಹಾಗೂ 900 ಮಹಿಳಾ ಮತದಾರರಿದ್ದಾರೆ. ಈ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳಾದ ತಾಲ್ಲೂಕು ಶಾಲೆ ಹಾಗೂ ಬಾಲಕಿಯರ ಶಾಲೆಯಲ್ಲಿ ಚುನಾವಣಾ ಆಯೋಗವು ಒಂದೊಂದು ಮತಗಟ್ಟೆಯನ್ನು ಸ್ಥಾಪಿಸಿತ್ತು.

“ನಮ್ಮ ಗ್ರಾಮವು ಓಜಲ್ ಪ್ರಾಥಾ (ಮಹಿಳೆಯರು ತಮ್ಮ ಮುಖವನ್ನು ಮುಚ್ಚಿಕೊಂಡು ಪುರುಷರೊಂದಿಗೆ ಬೆರೆಯದಿರುವುದು) ಪದ್ಧತಿಯಲ್ಲಿ ನಂಬಿಕೆ ಹೊಂದಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ನಮ್ಮ ಗ್ರಾಮದಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಮತಗಟ್ಟೆ ವ್ಯವಸ್ಥೆ ಹೊಂದಿದೆ. ಆದರೆ, ಚುನಾವಣಾ ಆಯೋಗವು ಈ ಬಾರಿ ಪ್ರತ್ಯೇಕ ಮಹಿಳಾ ಮತಗಟ್ಟೆಯನ್ನು ಸಾಮಾನ್ಯ ಮತಗಟ್ಟೆಯನ್ನಾಗಿ ಪರಿವರ್ತಿಸಿದೆ. ಹೀಗಾಗಿ ನವೆಂಬರ್ 25ರಂದು ಸಭೆ ನಡೆಸಿದ ಗ್ರಾಮಸ್ಥರು ಮತದಾನವನ್ನು ಬಹಿಷ್ಕರಿಸಲು ನಿರ್ಧರಿಸಿದರು” ಎಂದು ಧ್ರಾಫಾದ ನಿವಾಸಿಯಾಗಿರುವ, ಈ ಹಿಂದೆ ಕಾಂಗ್ರೆಸ್ ಶಾಸಕರಾಗಿದ್ದು ಇದೀಗ ಬಿಜೆಪಿಯಲ್ಲಿರುವ ಬ್ರಿಜ್ ರಾಜ್ ಸಿಂಗ್ ಜಡೇಜಾ ತಿಳಿಸಿದರು.

ಮತದಾನ ಮಾಡುವಂತೆ ಗ್ರಾಮಸ್ಥರ ಮನವೊಲಿಸಲು ಜಾಮ್ ನಗರದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸೌರಭ್ ಪಂಢಿ ಗ್ರಾಮಕ್ಕೆ ಜಮ್ಜೋಧ್ ಪುರ್ ತಹಶೀಲ್ದಾರ್ ಹಾಗೂ ತಾಲ್ಲೂಕು ಅಭಿವೃದ್ಧಿ ಅಧಿಕಾರಿಯನ್ನು ಕಳುಹಿಸಿಕೊಟ್ಟರೂ ಗ್ರಾಮಸ್ಥರು ಮಾತ್ರ ಮತದಾನವನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಅಂಟಿಕೊಂಡರು ಮತ್ತು ಮತದಾನ ಮುಕ್ತಾಯದ ವೇಳೆಗೆ ಒಂದೇ ಒಂದು ಮತ ಚಲಾವಣೆಯೂ ಆಗಲಿಲ್ಲ ಎಂದು ವರದಿಯಾಗಿದೆ.

“ಚುನಾವಣಾ ಆಯೋಗವು ಬಾಲಕಿಯರ ಶಾಲೆಯಲ್ಲಿ ಪ್ರತ್ಯೇಕ ಮಹಿಳಾ ಮತಗಟ್ಟೆ ಸ್ಥಾಪಿಸುವ ಮಾಮೂಲಿ ಪದ್ಧತಿಯನ್ನು ಪಾಲಿಸದಿರಲು ನಿರ್ಧರಿಸಿದೆ ಎಂಬ ಸಂಗತಿ ಸ್ಥಳೀಯ ಶಿಕ್ಷಕಿಯಿಂದ ನಮಗೆ ತಿಳಿಯಿತು” ಎಂದು ತಿಳಿಸಿರುವ ಧ್ರಾಫಾ ಗ್ರಾಮದ ಮುಖಂಡ ಧರ್ಮೇಂದ್ರ ಸಿಂಗ್ ಜಡೇಜಾ, “ನಮ್ಮ ಮಹಿಳೆಯರು ಪುರುಷರೊಂದಿಗೆ ನಿಂತು ಮತ ಚಲಾಯಿಸುವುದಿಲ್ಲ ಎಂದು ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಅವರಿಗೆ ತಿಳಿಸಲಾಯಿತು ಮತ್ತು ಈ ಸಂಬಂಧ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಆದರೆ, ಚುನಾವಣಾ ಆಯೋಗವು ಮಹಿಳೆಯರಿಗೆ ಪ್ರತ್ಯೇಕ ಮತಗಟ್ಟೆಯನ್ನು ಮಂಜೂರು ಮಾಡಲಿಲ್ಲ.” ಎಂದು ತಿಳಿಸಿದ್ದಾರೆ.

ಧ್ರಾಫಾ ಜಮ್ಜೋಧ್ ವಿಧಾನಸಭಾ ಕ್ಷೇತ್ರದ ಭಾಗವಾಗಿದ್ದು, ಕಳೆದ ಬಾರಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸಿತ್ತು. ಬ್ರಿಜ್ ರಾಜ್ ಸಿಂಗ್ 2007 ಮತ್ತು 2012ರಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಭನ್ವಾಡ್ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾಗಿದ್ದರು. ಕ್ಷೇತ್ರ ಪುನರ್ವಿಂಗಡಣೆಯ ನಂತರ ಈ ಕ್ಷೇತ್ರವು ಖಂಬಲಿಯಾ ಕ್ಷೇತ್ರದೊಂದಿಗೆ ವಿಲೀನವಾಗಿತ್ತು. 

ಇದನ್ನೂ ಓದಿ: ಈ ವರ್ಷ ಭಾರತೀಯ ವಲಸಿಗರಿಂದ ಸ್ವದೇಶಕ್ಕೆ ದಾಖಲೆಯ 100 ಶತಕೋಟಿ ಡಾಲರ್ ರವಾನೆ ನಿರೀಕ್ಷೆ

Similar News