19,000ಕ್ಕೂ ಅಧಿಕ ಮತದಾರರ ಹೆಸರು ತೆಗೆದು ಹಾಕಲು ವ್ಯವಸ್ಥಿತ ಷಡ್ಯಂತ್ರ: ಗೋಪಾಲ ಪೂಜಾರಿ ಆರೋಪ

Update: 2022-12-02 13:02 GMT

ಕುಂದಾಪುರ, ಡಿ.2: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2018 ರಿಂದ ಈವರೆಗಿನ ಪರಿಷ್ಕೃತ ಮತದಾರರ ಪಟ್ಟಿಯಿಂದ ಅಂದಾಜು 19,000ಕ್ಕೂ ಅಧಿಕ ಮತದಾರರನ್ನು ತೆಗೆದು ಹಾಕುವ ಹಾಗೂ ಸಂಬಂಧವೇ ಇಲ್ಲದ ಗ್ರಾಮಗಳಿಗೆ ಬದಲಾವಣೆ ಮಾಡುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದ್ದು, ಈ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಮಾಜಿ ಶಾಸಕ ಗೋಪಾಲ ಪೂಜಾರಿ ಒತ್ತಾಯಿಸಿದ್ದಾರೆ.

ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಗೊಂದಲಗಳಿದ್ದು ಲೋಪ ಸರಿಪಡಿಸಲು ಪ್ರಸ್ತುತ ನೀಡಿರುವ ಕಾಲಾವಕಾಶ ಸಾಲದು. ಯಾವುದೇ ಕಾರಣಕ್ಕೂ ಮತದಾರರ ಮತದಾನದ ಹಕ್ಕನ್ನು ಕಸಿದು ಕೊಳ್ಳುವ, ಮೊಟಕುಗೊಳಿಸಲು ಅವಕಾಶ ನೀಡಬಾರದು. ಆದುದರಿಂದ ಪಟ್ಟಿ ಯಲ್ಲಿ ಬಿಟ್ಟು ಹೋಗಿರುವ ಹೆಸರಿನ ಸೇರ್ಪಡೆ ಹಾಗೂ ಬದಲಾವಣೆಗೆ ಡಿ.8ರವರೆಗೆ ನೀಡಿರುವ ಕಾಲಾವಕಾಶವನ್ನು ಜಿಲ್ಲಾಡಳಿತ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ಒಂದೊಂದು ಬೂತ್‌ನಲ್ಲಿ 50-60 ಮತದಾರರ ಹೆಸರು ಬದಲಾವಣೆ ಯಾಗಿದೆ. ಮತದಾರರ ಪಟ್ಟಿಯಲ್ಲಿ ಮೃತರ ಹೆಸರನ್ನು ಕೈಬಿಡುವ ಬದಲು ಜೀವಂತ ಇದ್ದವರನ್ನು ಕೈಬಿಡಲಾಗಿದೆ. ನಿರ್ದಿಷ್ಟ ಜಾತಿ ಮತದಾರರ ಹೆಸರನ್ನು ಅವರ ವಾಸ್ತವ್ಯ ಗ್ರಾಮದ ಮತದಾರರ ಪಟ್ಟಿಯಿಂದ ತೆಗೆದು, ಸಂಬಂಧವೇ ಇಲ್ಲದ ಗ್ರಾಮಗಳಿಗೆ ವರ್ಗಾಯಿಸ ಲಾಗಿದೆ. ಈ ರಾಜಕೀಯ ಷಡ್ಯಂತರ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಕಂದಾಯ ಇಲಾಖೆಯ ಚುನಾವಣಾ ವಿಭಾಗದಲ್ಲಿ ಉಂಟಾಗಿರುವ ಈ ಎಲ್ಲ ಗೊಂದಲಗಳಿಗೆ ಜಿಲ್ಲಾಧಿಕಾರಿಯವರು, ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದರು.

ಶಾಸಕರು ಅಧಿಕಾರಿಗಳ ಮೇಲೆ ಅನಗತ್ಯ ರಾಜಕೀಯ ಒತ್ತಡಗಳನ್ನು ತರುತ್ತಿದ್ದಾರೆ. ದೂರು ದಾಖಲಿಸಿದವರ ಮೇಲೆಯೇ ಪ್ರಕರಣ ದಾಖಲಿಸಲು ಅಧಿಕಾರಿಗಳನ್ನು ಒತ್ತಾಯಿಸಲಾಗುತ್ತಿದೆ. ದಲಿತ ಸಮುದಾಯದವರ ಕುಂದು ಕೊರತೆಗಳನ್ನು ಆಲಿಸಲು ಈ ಮೊದಲಿನಂತೆ ಕಂದಾಯ ಹಾಗೂ ಪೊಲೀಸ್ ಇಲಾಖೆಯಲ್ಲಿ ನಿಯಮಿತವಾಗಿ ಸಭೆಗಳನ್ನು ನಡೆಸಬೇಕು. ಕಾನೂನು ಚೌಕಟ್ಟಿನ ಒಳಗೆ ಸಾಮಾಜಿಕ ಜಾಲಾತಾಣಗಳಲ್ಲಿ ಬರೆಯುವವರ ವಿರುದ್ಧ ರಾಜಕೀಯ ಕಾರಣಗಳಿಗಾಗಿ ಬಂಧಿಸುವ ಪ್ರವೃತ್ತಿಯನ್ನು ಕೂಡಲೇ ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯ ದರ್ಶಿ ಶರತ್‌ಕುಮಾರ ಶೆಟ್ಟಿ ಬಾಳಿಕೆರೆ ಹಾಗೂ ಬೈಂದೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅರವಿಂದ ಪೂಜಾರಿ ಪಡುಕೋಣೆ ಉಪಸ್ಥಿತರಿ ದ್ದರು.

ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿ ಇದ್ದಾಗ ಮೀನುಗಾರರ ಪ್ರತಿ ಕಾರ್ಡ್‌ಗೆ ತಲಾ 300 ಲೀಟರ್ ಸೀಮೆಎಣ್ಣೆ ನೀಡಲು ಕ್ರಮ ಕೈಗೊಂಡಿತ್ತು. ಇದೀಗ ಬಿಜೆಪಿ ಸರಕಾರ ಈ ಸೌಲಭ್ಯವನ್ನು ನೀಡದೆ ಇರುವುದರಿಂದ ನಾಡಾ ದೋಣಿ ಮೀನುಗಾರರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಮೀನುಗಾರರಿಗೆ ಸಂಕಷ್ಟ ಪರಿಹಾರ ನಿಧಿಯಿಂದಲೂ ಪರಿಹಾರ ಹಣ ಬಿಡುಗಡೆಯಾಗುತ್ತಿಲ್ಲ. ಮೀನುಗಾರರ ಮಹಿಳೆಯರಿಗೆ ಸಾಲ ಮನ್ನವೂ ಆಗುತ್ತಿಲ್ಲ. ಹಿಂದುತ್ವದ ಹೆಸರಲ್ಲಿ ಅಧಿಕಾರಕ್ಕೆ ಬಂದ ಈ ಸರಕಾರ ಸಂಪೂರ್ಣವಾಗಿ ಮೀನುಗಾರಿಕೆಯನ್ನು ಕಡೆಗಣಿಸಿದೆ.

-ಗೋಪಾಲ ಪೂಜಾರಿ, ಮಾಜಿ ಶಾಸಕರು

Similar News