ಜಾತಿ ಪ್ರಮಾಣಪತ್ರ ನೀಡದಿದ್ದರೆ ಚುನಾವಣೆ ಬಹಿಷ್ಕಾರ: ಭೋವಿ ಸಂಘ ಎಚ್ಚರಿಕೆ

Update: 2022-12-02 13:04 GMT

ಉಡುಪಿ: ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ವಾಸವಾಗಿ ರುವ ಭೋವಿ ಜಾತಿಯವರಿಗೆ ಜಾತಿ ಪ್ರಮಾಣ ಪತ್ರ ನೀಡುವುದನ್ನು 2018 ರಿಂದ ಸ್ಥಗಿತಗೊಳಿಸಲಾಗಿದ್ದು, ಕೂಡಲೇ ಈ ಜಾತಿ ಪ್ರಮಾಣಪತ್ರ ನೀಡುವುದನ್ನು ಪುನಾರಂಭಿಸಬೇಕು. ಇಲ್ಲದಿದ್ದರೆ ಭೋವಿ ಜಾತಿಯವರು 2023ರ ವಿಧಾನಸಭಾ ಚುನಾವಣೆ ಯನ್ನು ಬಹಿಷ್ಕರಿಸಲಿದ್ದಾರೆ ಎಂದು ಭೋವಿ ಸಮಾಜ ವಿಕಾಸ ಸಂಘದ ಉಡುಪಿ ಜಿಲ್ಲಾಧ್ಯಕ್ಷ ರತ್ನಾಕರ ಭೋವಿ ಎಚ್ಚರಿಕೆ ನೀಡಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಪಟ್ಟಿಯ ಕ್ರಮ ಸಂಖ್ಯೆ 23ರಲ್ಲಿರುವ ಭೋವಿ ಜಾತಿಯ ಜನ ಸಂಖ್ಯೆ ಉಡುಪಿ ಜಿಲ್ಲೆಯಲ್ಲಿ ಒಟ್ಟು ೬ಸಾವಿರ ಇದೆ. ಉಡುಪಿ ಜಿಲ್ಲೆಯನ್ನು ಹೊರತು ಪಡಿಸಿದರೆ ಉಳಿದ ಎಲ್ಲ ಜಿಲ್ಲೆಗಳಲ್ಲಿಯೂ ಈ ಜಾತಿಯವರಿಗೆ  ಜಾತಿ ಪ್ರಮಾಣ ಪತ್ರ ದೊರೆಯುತ್ತಿದೆ. ಇದು ಸಿಗದೆ ನಾವು ಸರಕಾರಿ ಸವಲತ್ತುಗಳಿಂದ ಸಂಪೂರ್ಣ ವಂಚಿತರಾಗುತ್ತಿದ್ದೇವೆ ಎಂದು ದೂರಿದರು.

ಈ ಬಗ್ಗೆ ಜಾತಿ ಪರಿಶೀಲನೆ ಸಮಿತಿಗೆ ದೂರು ನೀಡಿದರೂ ಪ್ರಯೋಜನ ವಾಗಲಿಲ್ಲ. ಇದರಲ್ಲಿ ಯಾರದ್ದೋ ಕೈವಾಡ ಇದೆ ಎಂಬುದು ನಮ್ಮ ಅನುಮಾನ. ನಮ್ಮ ಜಾತಿಗೆ ಮೀಸಲಾತಿಯು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಾತಾಗಿದೆ. ಅಧಿಕಾರಿಗಳು ಜಾತಿಗಳ ವರ್ಗೀಕರಣವನ್ನು ಸರಿಯಾಗಿ ಮಾಡದೇ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಮತ್ತು ಪ್ರವರ್ಗ ಒಂದರ ಪಟ್ಟಿಯಲ್ಲಿ ಹೆಸರನ್ನು ಇರಗೊಳಿಸಿ ನಮ್ಮ ಕೋರಿಕೆಯನ್ನು ದಾರಿ ತಪ್ಪಿಸುತ್ತಿದ್ದಾರೆ. ರಾಜಕೀಯ ವಾಗಿಯೂ ನಮಗೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂದು ಅವರು ಆರೋಪಿಸಿದರು.

ಸರಕಾರದಿಂದ ಉನ್ನತ ಮಟ್ಟದ ಅಧಿಕಾರಿಗಳಿಂದ ಈಗಾಗಲೇ ಆಡಳಿತ ವರ್ಗಕ್ಕೆ ತಲುಪಿರುವ ಅನೇಕ ಅಧಿಸೂಚನೆಗಳು ನಮಗೆ ಅನುಕೂಲಕರ ವಾಗಿಯೇ ಇದ್ದರೂ ಅದರ ಫಲವು ನಮಗೆ ಸಿಗುತ್ತಿಲ್ಲ. ಈಗಾಗಲೇ ಜಾತಿ ಪ್ರಮಾಣ ಇದ್ದವರಿಗೆ ನವೀಕರಣ ಕೂಡ ಮಾಡುತ್ತಿಲ್ಲ. ತಂದೆಗೆ ಜಾತಿ ಪ್ರಮಾಣ ಇದ್ದರೆ ಮಗನಿಗೆ ಸಿಗುತ್ತಿಲ್ಲ. ಆದುದರಿಂದ ಕೂಡಲೇ ಜಾತಿ ಪ್ರಮಾಣಪತ್ರ ನೀಡುವುದನ್ನು ಪುನಾರಂಭಿಸಬೇಕು. ಇಲ್ಲದಿದ್ದರೆ ಮುಂದೆ ಉಗ್ರ ರೀತಿಯ ಹೋರಾಟ ನಡೆಸಲಾಗುವುದು ಎಂದು ಅವರು ಹೇಳಿದರು.  

ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಸಂಚಾಲಕ ಸುಂದರ ನಾರಾಯಣ ಭೋವಿ, ಉಪಾಧ್ಯಕ್ಷ ಚಂದ್ರಶೇಖರ್ ಭೋವಿ, ಗ್ರಾಪಂ ಸದಸ್ಯ ಸೂಲ್ಯ ಭೋವಿ, ಮುಖಂಡರಾದ ಮಹೇಂದ್ರ ಭೋವಿ, ಉದಯ ಭೋವಿ ಉಪಸ್ಥಿತರಿದ್ದರು.  

Similar News