ವಿದ್ಯಾರ್ಥಿವೇತನ ರದ್ಧು: ಕೇಂದ್ರಕ್ಕೆ ಒತ್ತಡ ಹಾಕುವಂತೆ ಶಿಕ್ಷಣ ಸಚಿವರಿಗೆ ಮನವಿ

Update: 2022-12-02 13:06 GMT

ಉಡುಪಿ: ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ರದ್ದತಿಯನ್ನು ಹಿಂಪಡೆಯಬೇಕೆಂದು ಕೇಂದ್ರದ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಿ ಎಸ್‌ಐಓ ಉಡುಪಿ ಜಿಲ್ಲಾ ಘಟಕದ ವತಿಯಿಂದ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಮೂಲಕ ರಾಜ್ಯ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.

ಅಲ್ಪಸಂಖ್ಯಾತರ ಮತ್ತು ಬುಡಕಟ್ಟು ವ್ಯವಹಾರಗಳ ಹಾಗೂ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಿಂದ ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್‌ನ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಯೋಜನೆಯಲ್ಲಿ ಬರುವ ೧ ರಿಂದ ೮ನೇ ತರಗತಿಯ ವಿದ್ಯಾರ್ಥಿಗಳಿಗೆ ಕೊಡ ಮಾಡುತ್ತಿದ್ದ ವಿದ್ಯಾರ್ಥಿ ವೇತನ ವನ್ನು ಈ ವರ್ಷದಿಂದ ರದ್ದುಗೊಳಿಸುವ ಸುತ್ತೋಲೆಯನ್ನು ಹೊರಡಿಸಿ ರುವ ಕೇಂದ್ರ ಸರಕಾರದ ಈ ನಿರ್ಧಾರ ಖಂಡನೀಯ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸುತ್ತೋಲೆಯಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನವಕ್ಕೆ ಈ ಬಾರಿ ಸಲ್ಲಿಕೆಯಾದ ಅರ್ಜಿಗಳ ಪೈಕಿ 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳನ್ನು ಮಾತ್ರ ಸ್ಕಾಲರ್ಶಿಪ್‌ಗೆ ಪರಿಗಣಿಸಲಾಗುವುದು ಹಾಗೂ ರಾಜ್ಯ, ಜಿಲ್ಲಾ ಮತ್ತು ಶಿಕ್ಷಣ ಸಂಸ್ಥೆಯ ನೋಡಲ್ ಅಧಿಕಾರಿಗಳು ಪರಿಶೀಲನಾ ಹಂತದಲ್ಲಿ ಕೇವಲ ೯ ಮತ್ತು ೧೦ನೇ ತರಗತಿಯ ವಿದ್ಯಾರ್ಥಿಗಳ ಅರ್ಜಿಗಳನ್ನು ಪರಿಶೀಲಿಸಬೇಕೆಂದು ನಿರ್ದೇಶಿಸಿರುವುದು ಅಘಾತಕಾರಿಯಾಗಿದೆಂದು ಮನವಿಯಲ್ಲಿ ದೂರಲಾಗಿದೆ.

ಶಿಕ್ಷಣವು ಸಂವಿಧಾನದ ಏಳನೇ ಅನುಸೂಚಿ ಪ್ರಕಾರ ಸಮವರ್ತಿ ಪಟ್ಟಿಯಲ್ಲಿ ಬರುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಶಿಕ್ಷಣ ಸಚಿವರು ಕೇಂದ್ರ ಸರಕಾರವು ಹೊರಡಿಸಿ ರುವ ಈ ಸುತ್ತೋಲೆಯನ್ನು ಹಿಂಪಡೆದು, ಶಿಷ್ಯವೇತನವನ್ನು ಮುಂದುವರೆಸ ಬೇಕೆಂದು ಕೇಂದ್ರದ ಮೇಲೆ ಒತ್ತಡ ಹೇರಬೇಕು. ಶಿಕ್ಷಣ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿ ಯಾಗಿ ಜಾರಿಗೊಳಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಂಟಿಯಾಗಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಸ್‌ಐಓ ಮನವಿಯಲ್ಲಿ ಒತ್ತಾಯಿಸಿದೆ.

ಈ ಸಂದರ್ಭದಲ್ಲಿ ಎಸ್‌ಐಓ ಜಿಲ್ಲಾ ಕಾರ್ಯದರ್ಶಿ ವಸೀಮ್ ಗುಜ್ಜರ ಬೆಟ್ಟು, ಅಯಾನ್ ಮಲ್ಪೆ, ಆಝಾದ್ ಹೂಡೆ ಮತ್ತು ಪೈಝಲ್ ನಕ್ವ ಉಪಸ್ಥಿತರಿದ್ದರು.

Similar News