ಪುತ್ತಿಗೆ ಶ್ರೀಗಳ ನಾಲ್ಕನೇ ಪರ್ಯಾಯಕ್ಕೆ ಬಾಳೆ ಮುಹೂರ್ತ

Update: 2022-12-02 14:08 GMT

ಉಡುಪಿ, ಡಿ.2: 2024ರ ಜನವರಿ 18ರ ಮುಂಜಾನೆ ನಡೆಯುವ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರ ನಾಲ್ಕನೇ ಪರ್ಯಾಯದ ಪೂರ್ವಭಾವಿ ಸಿದ್ಧತೆಗಳಲ್ಲಿ ಮೊದಲನೆಯದಾದ ಬಾಳೆ ಮುಹೂರ್ತ ಇಂದು ಬೆಳಗ್ಗೆ ರಥಬೀದಿಯಲ್ಲಿರುವ ಪುತ್ತಿಗೆ ಮಠದ ಆವರಣದಲ್ಲಿ ನಡೆಯಿತು. 

ಉಡುಪಿಯಲ್ಲಿರುವ ಅಷ್ಟಮಠಗಳ ನಡುವೆ ಶ್ರೀಕೃಷ್ಣನ ಪೂಜೆಗೆ ದ್ವೈವಾರ್ಷಿಕ ಪರ್ಯಾಯ ಸಂಪ್ರದಾಯ 800 ವರ್ಷಗಳ ಹಿಂದೆ ಪ್ರಾರಂಭಗೊಂಡ ನಂತರ ಈಗ ನಡೆದಿರುವ ಶ್ರೀಕೃಷ್ಣಾಪುರ ಮಠಾಧೀಶರ ಪರ್ಯಾಯ 32ನೇ ಚಕ್ರದ ಮೂರನೇ (ಅಂದರೆ 251ನೇ) ಪರ್ಯಾಯವಾಗಿದ್ದು, ಮುಂದೆ ನಡೆಯುವ  ಪುತ್ತಿಗೆ ಮಠದ ಪರ್ಯಾಯ ಶ್ರೀಕೃಷ್ಣ ಮಠದ ಇತಿಹಾಸದ 252ನೇ ಪರ್ಯಾಯವಾಗಿ ದಾಖಲಾಗಲಿದೆ. 

ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಡೆದ ಬಾಳೆ ಮುಹೂರ್ತದ ಧಾರ್ಮಿಕ ವಿಧಿವಿಧಾನಗಳು ಹೆರ್ಗ ವೇದವ್ಯಾಸ ಭಟ್, ರಾಘವೇಂದ್ರ ಕೊಡಂಚ, ಕೇಂಜ ಶ್ರೀಧರ ತಂತ್ರಿಗಳ ನೇತೃತ್ವದಲ್ಲಿ ನಡೆದವು. 

ರಥಬೀದಿಯಲ್ಲಿರುವ ಪುತ್ತಿಗೆ ಮಠದಲ್ಲಿ ಪಟ್ಟದ ದೇವರಾದ ಉಪೇಂದ್ರ ವಿಠಲನಿಗೆ ಪೂಜೆ, ನವಗ್ರಹ ಪೂಜೆ ಹಾಗೂ ಪ್ರಾರ್ಥನೆಯ ಬಳಿಕ ಚಂದ್ರಮೌಳೀಶ್ವರ, ಅನಂತೇಶ್ವರ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಶ್ರೀಕೃಷ್ಣ ಮಠಕ್ಕೆ ತೆರಳಿ ಶ್ರೀಕೃಷ್ಣ ಮತ್ತು ಮುಖ್ಯಪ್ರಾಣರಿಗೆ, ಗೋಶಾಲೆ, ಗುರುಗಳ ಬೃಂದಾವನಗಳಲ್ಲಿ ಪ್ರಾರ್ಥಿಸಲಾಯಿತು. ಅನಂತರ ಶ್ರೀಮಠಕ್ಕೆ ಮರಳಿ ಬಾಳೆಗಿಡ, ತುಳಸಿ, ಕಬ್ಬುಗಳೊಂದಿಗೆ ರಥಬೀದಿಯಲ್ಲಿ ಮೆರವಣಿಗೆಯಲ್ಲಿ ಬಂದು ಪುತ್ತಿಗೆ ಮಠದ ಜಾಗದಲ್ಲಿ ಗಣ್ಯರು ಹಾಗೂ ಅತಿಥಿಗಳ ಉಪಸ್ಥಿತಿಯಲ್ಲಿ ಬಾಳೆಗಿಡ, ತುಳಸಿ ಹಾಗೂ ಕಬ್ಬಿನ ಗಿಡಗಳನ್ನು ನೆಟ್ಟು ನೀರೆರೆಯಲಾಯಿತು. 

ಪುತ್ತಿಗೆ ಶ್ರೀಗಳು ಈ ಹಿಂದೆ 1976ರಿಂದ 1978, 1992ರಿಂದ 94 ಹಾಗೂ  2008ರಿಂದ 2010ರವರೆಗೆ ಮೂರು ಪರ್ಯಾಯಗಳನ್ನು ಪೂರೈಸಿದ್ದಾರೆ. ಇನ್ನು 2024ರ ಜ.18ರಿಂದ 2026ರ ಜ.17ರವರೆಗೆ ಅವರ ನಾಲ್ಕನೇ ಪರ್ಯಾಯದ ಪೂಜಾವಧಿ ಇರುತ್ತದೆ.

ಪರ್ಯಾಯ ಪೂರ್ವ ಸಿದ್ಧತೆಯ ನಾಲ್ಕು ಮುಹೂರ್ತಗಳಲ್ಲಿ ಮೊದಲನೇಯ ದಾದ ಬಾಳೆ ಮುಹೂರ್ತ ಇಂದು ನಡೆದಿದ್ದು, ಇನ್ನು ಮುಂದೆ ಅಕ್ಕಿ ಮುಹೂರ್ತ, ಕಟ್ಟಿಗೆ ಮುಹೂರ್ತ ಹಾಗೂ ಭತ್ತ ಮುಹೂರ್ತಗಳು ನಡೆಯಲಿಕ್ಕಿವೆ. ಈ ನಡುವೆ ಅವರು ಪರ್ಯಾಯ ಪೀಠಾರೋಹಣಕ್ಕೆ ಮುನ್ನ  ಭಾರತದಾದ್ಯಂತ ಸಂಚರಿಸಿ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಬೇಕಿದೆ.

ತಾನು ಈ ಬಾರಿಯ ನಾಲ್ಕನೇ ಪರ್ಯಾಯವನ್ನು ತನ್ನ ಶಿಷ್ಯ ಶ್ರೀಸುಶ್ರೀಂದ್ರ ತೀರ್ಥರ ಜೊತೆ ಸೇರಿ ನಡೆಸುವುದಾಗಿ ಪುತ್ತಿಗೆ ಶ್ರೀಗಳು ಘೋಷಿಸಿದರು.

Similar News