ನಾಲ್ಕನೇ ಪರ್ಯಾಯದಲ್ಲಿ ಪಂಚ ಯೋಜನೆಗಳು: ಪುತ್ತಿಗೆಶ್ರೀ ಘೋಷಣೆ

Update: 2022-12-02 14:10 GMT

ಉಡುಪಿ, ಡಿ.2: ಶ್ರೀಕೃಷ್ಣ ಮಠದ ಸಂಪ್ರದಾಯದಂತೆ 16 ವರ್ಷಗಳ ಬಳಿಕ ನಾಲ್ಕನೇ ಬಾರಿ ಶ್ರೀಕೃಷ್ಣನ ಪೂಜಾ ಕೈಂಕರ್ಯಕ್ಕಾಗಿ 2024ರ ಜ.18ರಂದು ಸರ್ವಜ್ಞ ಪೀಠಾರೋಹಣ ಮಾಡುವ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ, ಈ ಬಾರಿ ತನ್ನ ಪರ್ಯಾಯಾವಧಿಯಲ್ಲಿ ಪಂಚ ಯೋಜನೆಗಳನ್ನು ಇಂದು ಘೋಷಿಸಿದ್ದಾರೆ.

ಪರ್ಯಾಯ ಪೂರ್ವಸಿದ್ಧತೆಯ ಮೊದಲನೇಯದಾದ ಬಾಳೆ ಮುಹೂರ್ತ ವನ್ನು ಇಂದು ಮಠದ ಆವರಣದಲ್ಲಿ ನಡೆಸಿದ ಸ್ವಾಮೀಜಿ, ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡುತ್ತಾರೆ ತನ್ನ ಹೊಸ ಯೋಜನೆ ಗಳನ್ನು  ಸಭೆಯ ಮುಂದೆ ಘೋಷಿಸಿದರು.

ತನ್ನ ಎರಡು ವರ್ಷಗಳ ಪರ್ಯಾಯಾವಧಿಯಲ್ಲಿ ಕೃಷ್ಣನ ಸಂಪ್ರೀತಿಗಾಗಿ ಈಗಾಗಲೇ ಚಾಲನೆಯಲ್ಲಿರುವ ಕೋಟಿ ಗೀತಾ ಲೇಖನ ಯಜ್ಞವನ್ನು ಪೂರ್ಣ ಗೊಳಿಸುವುದು, ಉಡುಪಿ ಮಠಕ್ಕೆ ಭೇಟಿ ನೀಡುವ ಭಕ್ತರಿಗಾಗಿ ನೂರಾರು ಕೋಣೆಗಳಿರುವ ವಸತಿ ವ್ಯವಸ್ಥೆ ನಿರ್ಮ್‌ಣ, ತನ್ನ ಯತಿ ದೀಕ್ಷೆಯ ಸುವರ್ಣ ಸಂಭ್ರಮದಂಗವಾಗಿ ಕೃಷ್ಣನಿಗೊಂದು ಪಾರ್ಥಸಾರಥಿ ಚಿನ್ನದ ರಥ ಸಮರ್ಪಣೆ,  ಕಲ್ಸಂಕದಲ್ಲಿ ಮಧ್ವ ವೃತ್ತ ಹಾಗೂ ಮಧ್ವ ಮಹಾಧ್ವಾರದ ನಿರ್ಮಾಣ, ಭಗವದ್ಗೀತೆ ಕುರಿತಂತೆ ಅಂತಾರಾಷ್ಟ್ರೀಯ ಸಮ್ಮೇಳನದ ಆಯೋಜನೆ ಹಾಗೂ ಗೀತಾ ಯಜ್ಞ ತನ್ನ ಪಂಚ ಯೋಜನೆಗಳೆಂದು ಅವರು ವಿವರಿಸಿದರು. 

ಶಿಷ್ಯ ಶ್ರೀಸುಶ್ರೀಂದ್ರತೀರ್ಥರ ಜೊತೆಸೇರಿ ಪರ್ಯಾಯವನ್ನು ನಡೆಸುವ ಸಂಕಲ್ಪ ತೊಟ್ಟಿರುವುದಾಗಿ ಹೇಳಿದ ಪುತ್ತಿಗೆಶ್ರೀಗಳು, ಜಗತ್ತಿನ ಎಲ್ಲಾ ಜನರೂ  ಪರಸ್ಪರ ಸಮನ್ವಯದಿಂದ ಬಾಳಿದರೆ ವಿಶ್ವದಲ್ಲಿ ಶಾಂತಿ, ನೆಮ್ಮದಿ, ಸಂತೋಷದ ವಾತಾವರಣ ಇರಲು ಸಾಧ್ಯ ಎಂದರು.

ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಇಂಗ್ಲೇಂಡ್ ಸೇರಿದಂತೆ ವಿವಿಧ ದೇಶಗಳಲ್ಲಿ ತಾನು ನಿರ್ಮಿಸಿರುವ 15 ಶ್ರೀಕೃಷ್ಣಮಂದಿರಗಳ ವ್ಯಾಪ್ತಿಯ ವಿದೇಶಿ ಭಕ್ತರು ತನ್ನ ಪರ್ಯಾಯದ ಸಂದರ್ಭದಲ್ಲಿ ಉಡುಪಿಗೆ ಆಗಮಿಸಲಿದ್ದಾರೆ ಎಂದು ಸ್ವಾಮೀಜಿ ನುಡಿದರು.

ಧಾರ್ಮಿಕ ಸಭೆಯಲ್ಲಿ ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ದೇವಿಪ್ರಸಾದ್ ಶೆಟ್ಟಿ ಬೆಳಪು, ಗುರ್ಮೆ ಸುರೇಶ್ ಶೆಟ್ಟಿ, ಹರಿಕೃಷ್ಣ ಪುನರೂರು, ಪ್ರದೀಪ್ ಕಲ್ಕೂರ, ಕಟೀಲು ಲಕ್ಷ್ಮೀನಾರಾಯಣ ಅಸ್ರಣ್ಣ, ವಿದ್ವಾನ್ ಹರಿ ದಾಸ ಉಪಾಧ್ಯ, ಪ್ರೊ.ಎಂ.ಬಿ.ಪುರಾಣಿಕ್, ಉದ್ಯಮಿ ಕಿಶೋರ್, ಪೊಲೀಸ್ ಅಧಿಕಾರಿ ಗಳಾದ ಪ್ರಮೋದ್‌ ಕುಮಾರ್, ಮಂಜುನಾಥ್‌ಗೌಡ ಮುಂತಾದವರು ಉಪಸ್ಥಿತರಿದ್ದರು.

ಸುಗುಣಮಾಲಾದ ಸಂಪಾದಕ ಮಹಿತೋಷ್ ಆಚಾರ್ಯ ಸ್ವಾಗತಿಸಿ, ಡಾ. ಬಿ.ಗೋಪಾಲಾಚಾರ್ ಕಾರ್ಯಕ್ರಮ ನಿರೂಪಿಸಿದರು.

Similar News