ಕಾಪುವಿನಲ್ಲಿ ಮನೆಮನೆಗೆ ತೆರಳಿ ಅನಧಿಕೃತ ಮಾಹಿತಿ ಸಂಗ್ರಹ: ವಿವಾದವಾದ ಕೂಡಲೇ ಅಭಿಯಾನ ನಿಲ್ಲಿಸಿದ ಪೊಲೀಸರು

Update: 2022-12-02 14:26 GMT

ಮಂಗಳೂರು, ಡಿ.2: ಕಾಪು ತಾಲೂಕು ವ್ಯಾಪ್ತಿಯಲ್ಲಿ ಆಶಾ ಕಾರ್ಯಕರ್ತರು ಅನಧಿಕೃತವಾಗಿ  ಮನೆ ಮನೆಗೆ ತೆರಳಿ ಮನೆಮಂದಿಯ ಸಂಪೂರ್ಣ ವಿವರಗಳನ್ನು ಒಳಗೊಂಡ ಮಾಹಿತಿಯನ್ನು ಸಂಗ್ರಹಿಸಿರುವ ವಿಚಾರ ಬೆಳಕಿಗೆ ಬಂದಿದ್ದು, ಇದು ಸಾರ್ವ ಜನಿಕರ ಆತಂಕಕ್ಕೆ ಕಾರಣವಾಗಿದೆ. ಈ ಕುರಿತ ವಿಡಿಯೋವೊಂದು ವೈರಲ್ ಆಗಿ  ವಿವಾದದ ರೂಪ ಪಡೆಯುತ್ತಲೇ ಸ್ಥಳೀಯ ಪೊಲೀಸರ ಮೂಲಕವೇ ನಡೆದಿದ್ದ ಈ ಮಾಹಿತಿ ಸಂಗ್ರಹ ಚಟುವಟಿಕೆಯನ್ನು ಬಳಿಕ ನಿಲ್ಲಿಸಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ಕುರಿತು ಮಹಿಳೆಯೊಬ್ಬರು ಮಾತಾಡಿದ ವಿಡಿಯೋ ಹಾಗೂ ವಿವರಗಳ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೆಲವು ದಿನಗಳ ಹಿಂದೆ ಉಚ್ಚಿಲದಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ  ಮನೆಮಂದಿಯ ಸಂಪೂರ್ಣ ಮಾಹಿತಿ ಭರ್ತಿ ಮಾಡುವ ಫಾರ್ಮ್ ನೀಡಿದ್ದು, ಈ ವೇಳೆ ಕೆಲವು ಮನೆಯವರು ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸರಕಾರದ ಯಾವುದೇ ಲೆಟರ್ ಹೆಡ್ ಹಾಗೂ ಅಧಿಕೃತ  ಸೀಲ್ ಇಲ್ಲದ ಫಾರ್ಮ್ ಹಿಡಿದುಕೊಂಡು ಬಂದಿರುವ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿ, ಉತ್ತರಿಸಲು ಹಿಂದೇಟು ಹಾಕಿದ್ದಾರೆ. ಈ ವಿಚಾರ ಸಾಮಾಜಿಕ ಜಾಲ ತಾಣಗಳಲ್ಲಿ ಸಾಕಷ್ಟು ಚರ್ಚೆ, ಗೊಂದಲ ಉಂಟು ಮಾಡಿದೆ.

‘ಆಶಾ ಕಾರ್ಯಕರ್ತೆಯರು ಮನೆಗೆ ಬಂದಾಗ ನಾವು ಮಾಹಿತಿ ಕೊಡಲು ಹಿಂದೇಟು ಹಾಕಿದ್ದಕ್ಕೆ ಕೊಡದೇ ಇದ್ದರೆ  ಪೊಲೀಸರೇ ಬಂದು ಅದನ್ನು ಪಡೆಯುತ್ತಾರೆ ಎಂದು ಬೆದರಿಕೆ ಕೂಡ ಹಾಕಲಾಗಿದೆ. ವೈಯಕ್ತಿಕವಾಗಿ ಪಾಸ್‌ಪೋರ್ಟ್ ಹಾಗೂ ಬ್ಯಾಂಕ್ ಖಾತೆಗಳ ಮಾಹಿತಿ ಕೇಳಿದಾಗ ನಮಗೆ ಈ ಬಗ್ಗೆ ಸಂಶಯ ಮೂಡಿದೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ ಆಶಾ ಕಾರ್ಯಕರ್ತೆಯರು ಸಮಪರ್ಕವಾಗಿ ಉತ್ತರ ನೀಡಿಲ್ಲ’ ಎಂದು ಉಚ್ಚಿಲದ ಮಹಿಳೆಯೊಬ್ಬರು ದೂರಿದ್ದಾರೆ.

‘ಮೊದಲು ಬಂದು ಆಧಾರ್ ಕಾರ್ಡ್ ನಂಬರ್ ಮಾತ್ರ ಕೇಳಿದರು. ನಂತರ ಒಂದೊಂದೇ ಮಾಹಿತಿ ಕೇಳಲು ಆರಂಭಿಸಿದರು. ಆ ಬಗ್ಗೆ ಮಾಹಿತಿ ಕೊಡುವುದಿಲ್ಲ ಎಂದು ಹೇಳಿದ್ದೇವೆ. ಅದಕ್ಕೂ ಅವರು ಪೊಲೀಸರ ಹೆಸರಿನಲ್ಲಿ ಬೆದರಿಸಿದ್ದಾರೆ. ಈ ಸಂಬಂಧ ಸ್ಥಳೀಯ ಗ್ರಾಪಂ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು  ಸಂಪರ್ಕಿಸಿದೆವು. ಅವರು ಯಾವುದೇ ಮಾಹಿತಿ ಸಂಗ್ರಹಕ್ಕೆ ಸೂಚಿಸಿಲ್ಲ ಎಂದು ಉತ್ತರ ನೀಡಿದ್ದಾರೆ. ಹಾಗಾದರೆ ಇವರು ಸಂಗ್ರಹಿಸಿರುವ ಮಾಹಿತಿ ಯಾರಿಗೆ ಹೋಗುತ್ತದೆ? ಎಂದು ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಪ್ರಶ್ನಿಸಿದ್ದಾರೆ.

ಎನ್‌ಆರ್‌ಸಿ, ಸಿಎಎ, ಮತದಾರರ ಪಟ್ಟಿಯಲ್ಲಿನ ಹೆಸರು ಡಿಲೀಟ್ ಹಗರಣ ಬಗ್ಗೆ ಜನರಿಗೆ ಸಾಕಷ್ಟು ಗೊಂದಲ ಇರುವಾಗ ಈ ರೀತಿ ಮಾಹಿತಿ ಸಂಗ್ರಹಿಸತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಾಗಭೂಷಣ ಉಡುಪ ಅವರನ್ನು ಸಂಪರ್ಕಿಸಿದಾಗ ಇಲಾಖೆಯಿಂದ ಆಶಾ ಕಾರ್ಯಕರ್ತೆಯರಿಗೆ ಈ ರೀತಿ ಮಾಹಿತಿ ಸಂಗ್ರಹಿಸುವಂತೆ ಯಾವುದೇ ಸೂಚನೆ ನೀಡಿಲ್ಲ ಎಂದು ತಿಳಿಸಿದ್ದಾರೆ.

ಪತ್ರದಲ್ಲಿದ್ದ ಮಾಹಿತಿಗಳ ವಿವರ...

ಹೆಸರು, ವಿಳಾಸ, ಮನೆಯ ಪ್ರತಿ ಸದಸ್ಯರ ಮೊಬೈಲ್, ಆಧಾರ್ ನಂಬರ್, ಇಮೇಲ್ ಐಡಿ, ಸ್ಥಿರ ದೂರವಾಣಿ ಸಂಖ್ಯೆ, ಮನೆಯವರ ಬಗ್ಗೆ ಮಾಹಿತಿ, ವಾಹನಗಳ ವಿವರ, ಮನೆಯ ಗ್ಯಾಸ್ ಕಂಪೆನಿ ಮತ್ತು ಗ್ಯಾಸ್ ನಂಬರ್, ಪಾನ್ ಕಾರ್ಡ್ (ಪ್ರತಿ ಸದಸ್ಯರದ್ದು), ಚುನಾವಣೆ ಗುರುತಿನ ಚೀಟಿ ನಂಬರ್ (ಪ್ರತಿ ಸದಸ್ಯರದ್ದು), ಪಾಸ್‌ಪೋರ್ಟ್ ನಂಬರ್, ಹಳೆಯ ಪಾಸ್‌ಪೋರ್ಟ್ ನಂಬರ್, ಮಕ್ಕಳ ವಿವರಗಳು ಹಾಗೂ ಕಲಿಯುತ್ತಿರುವ ಶಾಲೆಗಳ ವಿವರ, ಸಸ್ಯಹಾರಿ ಅಥವಾ ಮಾಂಸಹಾರಿ, ಜಾತಿ, ಮನೆಯವರ ಆರೋಗ್ಯ ಬಗ್ಗೆ ಮಾಹಿತಿ, ಕೋವಿಡ್ ಲಸಿಕೆ ಪಡೆದ ಬಗ್ಗೆ ಮಾಹಿತಿ, ಬೇರೆ ಯಾವುದೇ ಚುಚ್ಚುಮದ್ದು ತೆಗೆದುಕೊಂಡಲ್ಲಿ ಅದರ ಮಾಹಿತಿ, ಬ್ಯಾಂಕ್ ಅಕೌಂಟ್ ಎಷ್ಟಿದೆ, ಯಾವ ಬ್ಯಾಂಕ್ ಹಾಗೂ ಖಾತೆ ನಂಬರ್, ಅಂಚೆ ಕಚೇರಿಯಲ್ಲಿರುವ ಖಾತೆಗಳ ಹಾಗೂ ಉಳಿತಾಯ ಖಾತೆಗಳ ವಿವರಗಳು ಮನೆಯ ಪ್ರತಿ ಸದಸ್ಯರ ವಿದ್ಯಾಭ್ಯಾಸ, ವಿಧ್ಯಾಭ್ಯಾಸ ಮಾಡಿರುವ ಶಾಲೆಯ ಹೆಸರು ಮತ್ತು ವಿಳಾಸ, ಜನ್ಮ ಸ್ಥಳ ಮತ್ತು ದಿನಾಂಕದ ಮಾಹಿತಿಗಳನ್ನು ಕೇಳಲಾಗಿದೆ.

Similar News