ಅನಾಥ ಮಕ್ಕಳಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿಗೆ ಚಿಂತನೆ: ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ

Update: 2022-12-02 14:56 GMT

ಉಡುಪಿ: ಸಮಾಜದ ಅನಾಥ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ನೀಡುವ ಚಿಂತನೆ ನಡೆದಿದ್ದು, ಈ ಬಗ್ಗೆ  ಶೀಘ್ರವೇ ವರದಿಯೊಂದನ್ನು ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಗ್ಡೆ, ತಂದೆ-ತಾಯಿ ಇಲ್ಲದ, ಜಾತಿ-ಧರ್ಮ ತಿಳಿಯದೆ ಅನಾಥಾಲಯಗಳಲ್ಲಿ ಬೆಳೆಯುವ ಅನಾಥ ಮಕ್ಕಳಿಗೂ ಶಿಕ್ಷಣ ಹಾಗೂ ಉದ್ಯೋಗದಲ್ಲಿ ‘ಅನಾಥ’ರೆಂಬ ನೆಲೆಯಲ್ಲಿ ಮೀಸಲಾತಿ ನೀಡುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವ ಉದ್ದೇಶವಿದ್ದು, ಮುಂದೆ ಜಾತಿರಹಿತ ವ್ಯವಸ್ಥೆ ಇದರಿಂದ ಸಾಧ್ಯವಾಗಬಹುದು ಎಂದವರು ನುಡಿದರು.

ಆಯೋಗದ ಅಧ್ಯಕ್ಷನಾಗಿ ಎರಡು ವರ್ಷಗಳನ್ನು ಪೂರ್ಣಗೊಳಿಸಿದ್ದು, 2023ರವರೆಗೆ ತನ್ನ ಕಾರ್ಯಾವಧಿ ಇದೆ. ಆಯೋಗದ ಮುಖ್ಯಸ್ಥನಾಗಿ ಇದುವರೆಗೆ 17 ವರದಿಗಳು ಮುದ್ರಣಗೊಂಡು ಸಿದ್ಧವಾಗಿವೆ. ಇನ್ನೂ 7-8 ವರದಿಗಳು ಅಂತಿಮಗೊಂಡು ಮುದ್ರಣದ ಹಂತದಲ್ಲಿವೆ ಎಂದವರು ತಿಳಿಸಿದರು.

ಕರಾವಳಿಯಲ್ಲಿ ಕುಡುಬಿ ಸಮುದಾಯ ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರ್ಪಡೆಗೊಳಿಸಬೇಕೆಂಬ ಬೇಡಿಕೆಯನ್ನಿಟ್ಟಿದ್ದು, ಇದಕ್ಕೆ ರಾಜ್ಯ ಸರಕಾರದ ಮೂಲಕ ಕೇಂದ್ರದ ಎಸ್‌ಸಿ,ಎಸ್‌ಟಿ ಕಮಿಷನ್‌ಗೆ ಬರೆಯ ಬೇಕಾಗುತ್ತದೆ. ಆದರೆ ರಾಜ್ಯದಲ್ಲಿ ಇವರನ್ನು ನೋಟಿಪೈಡ್ ಕಮ್ಯುನಿಟಿ ಎಂದು ಪರಿಗಣಿಸಿದರೆ ಕೇಂದ್ರದ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.

ಪೆರಿಯಾಳ್ ಸಮುದಾಯಕ್ಕೆ ಮಡಿವಾಳ ಪ್ರಮಾಣಪತ್ರವನ್ನು ನೀಡುತಿದ್ದು, ಇದನ್ನು ಸರಿಪಡಿಸುವಂತೆ ಮನವಿ ಮಾಡಿದ್ದಾರೆ. ವಿವಿಧ ಜನಾಂಗ, ಸಮುದಾಯಗಳನ್ನು 2ಎ ವರ್ಗಕ್ಕೆ ಸೇರ್ಪಡೆಗೊಳಿಸುವ ಬೇಡಿಕೆಗಳೂ ಸೇರಿ ದಂತೆ ಆಯೋಗದ ಮುಂದೆ 50ಕ್ಕೂ ಅಧಿಕ ಬೇಡಿಕೆಗಳ ಪಟ್ಟಿ ಇದೆ. ಇವುಗಳ ಕೂಲಂಕಷ ಪರಿಶೀಲನೆ, ಅಧ್ಯಯನದ ಬಳಿಕ ನಿರ್ಧಾರಕ್ಕೆ ಬರಬೇಕಿದೆ ಎಂದು ಜಯಪ್ರಕಾಶ್ ಹೆಗ್ಡೆ ತಿಳಿಸಿದರು.

ವೀರಶೈವ-ಲಿಂಗಾಯತ, ಪಂಚಮಶಾಲಿ ಸಮುದಾಯ 3ಎಯಿಂದ 2ಎಗೆ ಸೇರಿಸಲು ಬೇಡಿಕೆ ಇರಿಸಿದ್ದು, ಸಮುದಾಯದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಪ್ರಗತಿಯ ಅಧ್ಯಯನ ನಡೆಯಬೇಕಾಗಿದೆ. ಸಮುದಾಯ ಸರಕಾರಕ್ಕೆ ಗಡುವು ನೀಡಬಹುದು, ಆದರೆ ಆಯೋಗಕ್ಕೆ ಯಾವುದೇ ಗಡುವು ನೀಡಲು ಸಾಧ್ಯವಿಲ್ಲ ಎಂದರು.

ಆಯೋಗದ ಅಧ್ಯಕ್ಷನಾಗಿ ತಾನು 16 ಜಿಲ್ಲೆಗಳಿಗೆ ಭೇಟಿ ನೀಡಿದ್ದು, ಇನ್ನೂ 14 ಜಿಲ್ಲೆಗಳಿಗೆ ಭೇಟಿ ನೀಡಬೇಕಿದೆ. ಪ್ರತಿ ಜಿಲ್ಲೆಗಳಲ್ಲೂ ಜಿಲ್ಲಾಧಿಕಾರಿ, ಸಿಇಓ, ತಹಶೀಲ್ದಾರ್‌ರೊಂದಿಗೆ ಸಭೆ ನಡೆಸಿ ಅಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮಕ್ಕಳಿಗೆ ಪ್ರಮಾಣ ಪತ್ರ ನೀಡಲು ಇರುವ ತೊಂದರೆಗಳ ನಿವಾರಣೆಗೆ ಪ್ರಯತ್ನಿಸು ತ್ತಿರುವುದಾಗಿ ನುಡಿದರು.

ಆಯೋಗದ ಕೆಲಸ-ಕಾರ್ಯಗಳೊಂದಿಗೆ ಜನತೆಯ ಪರವಾಗಿ ಕೆಲಸ ಮಾಡುವುದನ್ನೂ ಮುಂದುವರಿಸಿದ್ದೇನೆ ಎಂದು ಅವರು ಮತ್ತೆ ಸಕ್ರೀಯ ರಾಜಕಾರಣಕ್ಕೆ ಇಳಿಯುವಿರಾ ಎಂದು ಕೇಳಿದಾಗ ಉತ್ತರಿಸಿದರು. ಸ್ಪರ್ಧೆಗೆ ಅವಕಾಶ ಸಿಕ್ಕಿದರೆ, ಹುದ್ದೆಗೆ ರಾಜಿನಾಮೆ ನೀಡಿ ಸ್ಪರ್ಧಿಸಬೇಕಾಗುತ್ತದೆ ಎಂದರು.

ಪಕ್ಷೇತರನಾಗಿ ಮತ್ತೆ ಸ್ಪರ್ಧಿಸುವ ಸಾಧ್ಯತೆ ಇದೆಯೇ ಎಂದು ಕೇಳಿದಾಗ, ಪಕ್ಷೇತರನಾಗಿ ನಿಂತು ಗೆಲ್ಲುವ ಕಾಲ ಈಗಿಲ್ಲ. ಈಗ ಏನಿದ್ದರೂ ಜಾತಿ ಲೆಕ್ಕಾಚಾರದಲ್ಲೇ ಮತದಾರರು ಹೆಚ್ಚಾಗಿ ಮತ ಚಲಾಯಿಸುವ ಕಾರಣ ಪಕ್ಷಗಳೂ ಜಾತಿಗೆ ಮಣೆ ಹಾಕುತ್ತವೆ ಎಂದರು.

ಜನಸಾಮಾನ್ಯರಿಂದ ಮತ್ತೆ ಸ್ಪರ್ಧಿಸುವಂತೆ ಒತ್ತಾಯ ಕೇಳಿಬರುತ್ತಿದೆ. ಆದರೆ  ಜನರ ಮಧ್ಯ ಇರುವ ಜನಪ್ರಿಯತೆ ಮತಗಳಾಗಿ ಪರಿವರ್ತನೆಯಾಗುವುದೇ ಎಂಬುದನ್ನು ನೋಡಬೇಕಾಗಿದೆ ಎಂದು ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ  ಸ್ಪಷ್ಟ ನಿಲುವು ಹೇಳದೆ, ಯಾವ ಸೂಚನೆ ನೀಡದೇ ಮಾತು ಮುಗಿಸಿದರು.

ಕಾಂತರಾಜ್ ವರದಿ ಅಧಿಕೃತಗೊಂಡಿಲ್ಲ

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಹಿಂದಿನ ಅಧ್ಯಕ್ಷ ಕಾಂತರಾಜು ನೇತೃತ್ವದಲ್ಲಿ ಸಿದ್ಧಪಡಿಸಲಾದ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷಾ ವರದಿಯನ್ನು ಅದರ ಸದಸ್ಯ ಕಾರ್ಯದರ್ಶಿ ಪ್ರಮಾಣೀಕರಿಸಬೇಕು. ಆದರೆ ಈವರೆಗೆ ಅದು ಆಗಿಲ್ಲ. ಹೀಗಾಗಿ ಆಯೋಗ ಅದನ್ನು ಅಧಿಕೃತಗೊಳಿಸಲಾಗಿಲ್ಲ ಎಂದು ಜಯಪ್ರಕಾಶ್ ಹೆಗ್ಡೆ ತಿಳಿಸಿದರು. ವರದಿ ಅಧಿಕೃತಗೊಂಡರೆ ಸರಕಾರ ಅದನ್ನು ಒಪ್ಪಬಹುದು ಎಂದರು.

Similar News