ಮಹಿಳಾ ಸಹೋದ್ಯೋಗಿಗೆ ಕಪಾಳಮೋಕ್ಷಗೈದ ಸಂಸದ; ಸೆನೆಗಲ್‌ ಸಂಸತ್ತಿನಲ್ಲಿ ಕೋಲಾಹಲ

Update: 2022-12-02 17:07 GMT

ಡಕಾರ್:‌ ಸೆನೆಗಲ್‌ (Senegal) ದೇಶದ ಸಂಸತ್ತಿನಲ್ಲಿ ಸಂಸದರೊಬ್ಬರು ತಮ್ಮ ಮಹಿಳಾ ಸಹೋದ್ಯೋಗಿಗೆ ಕಪಾಳಮೋಕ್ಷಗೈದ ಘಟನೆ ಗುರುವಾರ ನಡೆದಿದ್ದು ಇದರ ಬೆನ್ನಲ್ಲೇ ಸಂಸತ್ತಿನಲ್ಲಿ ಹಿಂಸಾತ್ಮಕ ಘರ್ಷಣೆಗಳು (parliament brawl) ನಡೆದಿವೆ. ದೇಶದ ಆಡಳಿತ ಮತ್ತು ವಿಪಕ್ಷ ರಾಜಕಾರಣಿಗಳ ನಡುವೆ ಹೆಚ್ಚುತ್ತಿರುವ ವೈರತ್ವದ ನಡುವೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಬಜೆಟ್‌ ಮಂಡನೆ ವೇಳೆ ವಿಪಕ್ಷ ಸಂಸದ  ಮಸ್ಸಟ ಸಂಬ್‌ (Massata Samb) ಎಂಬವರು  ಆಡಳಿತ ಬೆನೊ ಬೊಕ್ಕ್‌ ಯಕಾರ್‌ ಮೈತ್ರಿಯ  ಸಂಸದೆಯಾಗಿರುವ ಅಮಿ ಎನ್ ಡಿಯೈ ಗ್ನಿಬಿ (Amy Ndiaye Gniby) ಅವರು ಕುಳಿತಲ್ಲಿಗೆ ತೆರಳಿ ಆಕೆಗೆ ಕಪಾಳಮೋಕ್ಷಗೈದಿದ್ದರು. ಗ್ನಿಬಿ ತಕ್ಷಣ ಕುರ್ಚಿಯೊಂದನ್ನು ಸಂಬ್‌ ಅವರತ್ತ ಎಸೆದರೆ ಇದರ ಬೆನ್ನಲ್ಲೇ ಇನ್ನೊಬ್ಬ ಸಂಸದ ಗ್ನಿಬಿ ಅವರನ್ನು ನೆಲಕ್ಕೆ ಬೀಳಿಸಿದ್ದಾರೆ. ನಂತರ ಸಂಸದರು ಪರಸ್ಪರ ಕೈಮಿಸಲಾಯಿಸಿಕೊಂಡಿದ್ದೇ ಅಲ್ಲದೆ ನಿಂದನೆಯಲ್ಲೂ ತೊಡಗಿಕೊಂಡ ಕಾರಣ ಕಲಾಪವನ್ನು ಸ್ಥಗಿತಗೊಳಿಸಲಾಯಿತು.

ಕಳೆದ ಜುಲೈ ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ ಆಡಳಿತ ಪಕ್ಷ ತನ್ನ ಬಹುಮತವನ್ನು ಕಳೆದುಕೊಂಡಂದಿನಿಂದ ಆಡಳಿತ ಮತ್ತು ವಿಪಕ್ಷಗಳ ನಡುವೆ ವೈರತ್ವ ಹೆಚ್ಚಾಗಿತ್ತು. ಅಧ್ಯಕ್ಷ ಮ್ಯಾಕಿ ಸಾಲ್ಲ್‌ ಅವರು ಮೂರನೇ ಅವಧಿಗೆ 2024 ರಲ್ಲಿ ಸ್ಪರ್ಧಿಸಲಿದ್ದಾರೆಂಬ ವದಂತಿಗಳಿದ್ದರೂ ಅವರು ಈ ಕುರಿತು ಸ್ಪಷ್ಟನೆ  ನೀಡಿಲ್ಲ. ಆದರೆ ಅವರು ಮೂರನೇ ಅವಧಿಗೆ ಸ್ಪರ್ಧಿಸಿದರೆ ಹಿಂದಿನ ಆಶ್ವಾಸನೆ ಹಾಗೂ ಅವರ ಅವಧಿ ಮಿತಿಯನ್ನು ಮೀರಿದಂತೆ ಎಂದು ವಿಪಕ್ಷಗಳು ಹೇಳುತ್ತಿವೆ.

ಆದರೆ ಸಂವಿಧಾನಿಕ ಬದಲಾವಣೆಯೊಂದು ಅಧ್ಯಕ್ಷರಿಗೆ ಮರುಸ್ಪರ್ಧಿಸಲು ಅವಕಾಶ ನೀಡುತ್ತದೆ ಎಂದು ಅವರ ಬೆಂಬಲಿಗರು ಹೇಳುತ್ತಿದ್ದಾರೆ.

ಘಟನೆಯ ವೀಡಿಯೋ ವೈರಲ್‌ ಆಗಿದ್ದು ಮಹಿಳೆಯೊಬ್ಬರ ಮೇಲೆ ನಡೆಸಲಾದ ದೌರ್ಜನ್ಯದ ಕುರಿತು ಸಾಕಷ್ಟು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Full View

Similar News