ಫಿಫಾ ವಿಶ್ವಕಪ್: ಕ್ಯಾಮರೂನ್ ವಿರುದ್ಧ ಸೋತರೂ ಬ್ರೆಝಿಲ್‍ಗೆ ಅಗ್ರಸ್ಥಾನ

Update: 2022-12-03 02:18 GMT

ಹೊಸದಿಲ್ಲಿ: ಐದು ಬಾರಿಯ ಚಾಂಪಿಯನ್ ಬ್ರೆಝಿಲ್ ತಂಡಕ್ಕೆ ಆಘಾತ ನೀಡಿದ ಕ್ಯಾಮರೂನ್, ಶನಿವಾರ ನಡೆದ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಬಲಿಷ್ಠ ತಂಡದ ವಿರುದ್ಧ 1-0 ಗೋಲುಗಳ ಜಯ ದಾಖಲಿಸಿ ಇತಿಹಾಸ ನಿರ್ಮಿಸಿತು.

ಲುಸೈಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಕೊನೆಯಲ್ಲಿ ಗೆಲುವಿನ ಗೋಲು ಬಾರಿಸಿದ ಕ್ಯಾಮರೂನ್, ವಿಶ್ವಕಪ್‍ನಲ್ಲಿ ಬ್ರೆಝಿಲ್ ತಂಡವನ್ನು ಸೋಲಿಸಿದ ಮೊಟ್ಟಮೊದಲ ಆಫ್ರಿಕನ್ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಸೋಲಿನ ಹೊರತಾಗಿಯೂ ಜಿ ಗುಂಪಿನ ಅಗ್ರಸ್ಥಾನಿಯಾಗಿ ಬ್ರೆಝಿಲ್ ನಾಕೌಟ್ ಪ್ರವೇಶ ಪಡೆಯಿತು.

ವಿನ್ಸೆಂಟ್ ಅಬೂಬಕರ್ 92ನೇ ನಿಮಿಷದಲ್ಲಿ ಗೆಲುವಿನ ಗೋಲು ಗಳಿಸಿದರು. ಆದರೆ ಅದಾದ ತಕ್ಷಣ ಸಂಭ್ರಮಾಚರಣೆ ಸಂದರ್ಭದಲ್ಲಿ ಶರ್ಟ್ ತೆಗೆದ ಕಾರಣಕ್ಕಾಗಿ ಎರಡನೇ ಹಳದಿ ಕಾರ್ಡ್ ಪಡೆದು ಮೈದಾನದಿಂದ ನಿರ್ಗಮಿಸಿದರು. ಈ ಗೆಲುವಿನ ಹೊರತಾಗಿಯೂ ಕ್ಯಾಮರೂನ್ ತಂಡಕ್ಕೆ ನಾಕೌಟ್ ಅವಕಾಶದ ಬಾಗಿಲು ತೆರೆಯಲಿಲ್ಲ.

ಪಂದ್ಯಕ್ಕೆ ಮುನ್ನವೇ ಅಂತಿಮ ಎರಡು ಪಂದ್ಯಗಳಿಂದ ಆರು ಅಂಕ ಕಲೆ ಹಾಕಿ 16ರ ಘಟ್ಟ ತಲುಪಿದ್ದ ಬ್ರೆಝಿಲ್, ಗೋಲು ಅಂತರದ ಆಧಾರದಲ್ಲಿ ಅಗ್ರಸ್ಥಾನ ಪಡೆಯಿತು. ಜಿ ಗುಂಪಿನ ಇನ್ನೊಂದು ಪಂದ್ಯದಲ್ಲಿ ಸೆರ್ಬಿಯಾ ವಿರುದ್ಧ 3-2 ಗೋಲುಗಳ ಜಯ ಸಾಧಿಸಿದ ಸ್ವಿಝರ್‌ ಲ್ಯಾಂಡ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಕ್ಯಾಮರೂನ್ ನಾಲ್ಕು ಅಂಕ ಪಡೆದರೆ ಸೆರ್ಬಿಯಾ ಒಂದು ಅಂಕದೊಂದಿಗೆ ಕೊನೆಯ ಸ್ಥಾನ ಗಳಿಸಿತು.‌

ಬ್ರೆಝಿಲ್ ತಂಡದ ಕೋಚ್ ಟೈಟ್, ತಮ್ಮ ತಂಡದಲ್ಲಿ ಒಂಬತ್ತು ಬದಲಾವಣೆಯೊಂದಿಗೆ ಎರಡನೇ ಸಾಲಿನ ತಂಡವನ್ನು ಕಣಕ್ಕೆ ಇಳಿಸಿದ್ದರು. ಆದರೆ ಈ ಆಟಗಾರರು 21 ಪ್ರಯತ್ನಗಳನ್ನು ನಡೆಸಿ, ಏಳು ಬಾರಿ ಗುರಿ ಸೇರಿಸುವ ಯತ್ನದಲ್ಲಿ ವಿಫಲರಾದರು. ಪಂದ್ಯದಲ್ಲಿ ಶೇಕಡ 65ರಷ್ಟು ಅವಧಿಯಲ್ಲಿ ಚೆಂಡಿನ ಸ್ವಾಧೀನ ಸಾಧಿಸಿದ್ದರು. 2002ರ ವಿಶ್ವಕಪ್‍ನಲ್ಲಿ ಸೌದಿ ಅರೇಬಿಯಾ ವಿರುದ್ಧ ಗೆದ್ದ ಬಳಿಕ ಗೆಲುವಿಗಾಗಿ ಹಂಬಲಿಸುತ್ತಿದ್ದ ಕ್ಯಾಮರೂನ್ ತಂಡಕ್ಕೆ ಕೊನೆ ಕ್ಷಣದಲ್ಲಿ ಅಬೂಬಕರ್ ಗೆಲುವಿನ ಉಡುಗೊರೆ ನೀಡಿದರು.

ನಾಕೌಟ್ ಹಂತದಲ್ಲಿ ಬ್ರೆಝಿಲ್ ತಂಡ ಎಚ್ ಗುಂಪಿನ ದಕ್ಷಿಣ ಕೊರಿಯಾ ವಿರುದ್ಧ ಸೆಣೆಸಲಿದೆ. ಪೋರ್ಚ್‍ಗಲ್ ವಿರುದ್ಧ 2-1 ಗೋಲುಗಳ ಗೆಲುವಿನೊಂದಿಗೆ ದಕ್ಷಿಣ ಕೊರಿಯಾ ಈ ಹಂತಕ್ಕೆ ಮುನ್ನಡೆದಿತ್ತು.

Similar News