ಬಾಂಗ್ಲಾದೇಶ ವಿರುದ್ದ ಏಕದಿನ ಸರಣಿ: ಮುಹಮ್ಮದ್ ಶಮಿ ಬದಲಿಗೆ ಉಮ್ರಾನ್ ಮಲಿಕ್ ಆಯ್ಕೆ

Update: 2022-12-03 14:22 GMT

ಹೊಸದಿಲ್ಲಿ: ಹಿರಿಯ ವೇಗದ ಬೌಲರ್ ಮುಹಮ್ಮದ್ ಶಮಿ ಅವರು ಭುಜದ ಗಾಯದಿಂದಾಗಿ ರವಿವಾರ ಆರಂಭವಾಗುವ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ.  ಶಮಿ ಅವರ ಬದಲಿಗೆ ಉಮ್ರಾನ್ ಮಲಿಕ್ ಅವರನ್ನು ಭಾರತ ತಂಡದಲ್ಲಿ ಸೇರಿಸಲಾಗಿದೆ ಎಂದು ಬಿಸಿಸಿಐ ಶನಿವಾರ ಪ್ರಕಟಿಸಿದೆ.

ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತ ತಂಡ ಸೆಮಿಫೈನಲ್‌ನಲ್ಲಿಯೇ  ನಿರ್ಗಮಿಸಿದ ಆಸ್ಟ್ರೇಲಿಯದಿಂದ ಹಿಂದಿರುಗಿದ ನಂತರ ಶಮಿ ತರಬೇತಿ ಅವಧಿಯಲ್ಲಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಡಿಸೆಂಬರ್ 14 ರಿಂದ ಚಿತ್ತಗಾಂಗ್‌ನಲ್ಲಿ ಆರಂಭವಾಗುವ ಮುಂಬರುವ ಎರಡು ಟೆಸ್ಟ್ ಸರಣಿಯನ್ನು ಕೂಡ ಶಮಿ ಕಳೆದುಕೊಳ್ಳಬಹುದು.

ವೇಗದ ಬೌಲರ್ ಮುಹಮ್ಮದ್ ಶಮಿ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ಮುನ್ನಾದಿನದ ತರಬೇತಿ ಅವಧಿಯಲ್ಲಿ ಭುಜದ ಗಾಯಕ್ಕೆ ಒಳಗಾಗಿದ್ದರು. ಅವರು ಪ್ರಸ್ತುತ ಬೆಂಗಳೂರಿನ ಎನ್‌ಸಿಎಯಲ್ಲಿ ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ. ಅವರಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಅಖಿಲ ಭಾರತ ಹಿರಿಯ ಆಯ್ಕೆ ಸಮಿತಿಯು ಶಮಿ ಬದಲಿಗೆ ಉಮ್ರಾನ್ ಮಲಿಕ್ ಅವರನ್ನು ಹೆಸರಿಸಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಮ್ರಾನ್ ಮಲಿಕ್ ವಿಶ್ವ ಕ್ರಿಕೆಟ್‌ನ ಅತ್ಯಂತ ವೇಗದ ಬೌಲರ್‌ಗಳಲ್ಲಿ ಒಬ್ಬರು. ಅವರು ಇತ್ತೀಚೆಗೆ ನ್ಯೂಝಿಲ್ಯಾಂಡ್‌ನಲ್ಲಿ ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನು ಆಡಿದ್ದರು. ಅಲ್ಲಿ ಅವರು ಎರಡು ಪಂದ್ಯಗಳನ್ನು ಆಡಿ ಎರಡು ವಿಕೆಟ್‌ಗಳನ್ನು ಪಡೆದಿದ್ದರು.

ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿಗೆ ಭಾರತ ತಂಡ:

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಬ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್ ), ಶಹಬಾಝ್ ಅಹ್ಮದ್, ಅಕ್ಷರ್ ಪಟೇಲ್ , ವಾಶಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮುಹಮ್ಮದ್ ಸಿರಾಜ್, ದೀಪಕ್ ಚಹಾರ್, ಕುಲದೀಪ್ ಸೇನ್, ಉಮ್ರಾನ್ ಮಲಿಕ್.

Similar News