ನಮ್ಮ ತೈಲದ ಬೇಡಿಕೆ ಕುಸಿಯದು: ರಶ್ಯ ಪ್ರತಿಕ್ರಿಯೆ

Update: 2022-12-03 16:31 GMT

ಮಾಸ್ಕೊ, ಡಿ.3: ಜಿ7 ದೇಶಗಳು ನಮ್ಮ ತೈಲಕ್ಕೆ ಬೆಲೆ ಮಿತಿಗೊಳಿಸಿರುವುದು ಅಪಾಯಕಾರಿ ಪ್ರಯತ್ನವಾಗಿದೆ ಎಂದು ಹೇಳಿರುವ ರಶ್ಯ, ಇದರಿಂದ ನಮ್ಮ ತೈಲದ ಮೇಲಿನ ಬೇಡಿಕೆಯ ಮೇಲೆ ಪರಿಣಾಮವಾಗದು ಎಂದಿದೆ.

ನಮ್ಮ ತೈಲಕ್ಕೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೊಸ ಖರೀದಿಗಾರರು ಸಿಗುತ್ತಾರೆ. ಆದರೆ ಈ ರೀತಿಯ ಕ್ರಮಗಳು ಅನಿವಾರ್ಯವಾಗಿ ಅನಿಶ್ಚಿತತೆಯನ್ನು ಹೆಚ್ಚಿಸುತ್ತವೆ ಮತ್ತು ಕಚ್ಛಾತೈಲ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗುತ್ತದೆ ಎಂದು ರಶ್ಯದ ವಿದೇಶಾಂಗ ಇಲಾಖೆ ಪ್ರತಿಕ್ರಿಯಿಸಿದೆ. ಬೆಲೆ ಮಿತಿಯನ್ನು ಜಾರಿಗೊಳಿಸುವ ದೇಶಗಳಿಗೆ ತೈಲ ಪೂರೈಸುವುದಿಲ್ಲ ಎಂದು ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin)ಈಗಾಗಲೇ ಘೋಷಿಸಿದ್ದಾರೆ.

ಜಿ7 ದೇಶಗಳ ಈ ಕ್ರಮ ಮುಕ್ತ ಮಾರುಕಟ್ಟೆ ತತ್ವಗಳನ್ನು ಮರುರೂಪಿಸಿದಂತಾಗಿದೆ ಎಂದು ಅಮೆರಿಕದಲ್ಲಿನ ರಶ್ಯ ರಾಯಭಾರ ಕಚೇರಿ ಟೀಕಿಸಿದೆ. ಈ ಅನಗತ್ಯ ಕ್ರಮಗಳ ಹೊರತಾಗಿಯೂ, ರಶ್ಯದ ತೈಲಕ್ಕಿರುವ ಬೇಡಿಕೆ ಮುಂದುವರಿಯುವ ವಿಶ್ವಾಸವಿದೆ ಎಂದು ರಾಯಭಾರ ಕಚೇರಿ ಟ್ವೀಟ್ ಮಾಡಿದೆ.

Similar News