1 ಶತಕೋಟಿ ಡಾಲರ್ ಸಾಲ ತೀರಿಸಿ `ಡಿಫಾಲ್ಟ್' ತಪ್ಪಿಸಿಕೊಂಡ ಪಾಕಿಸ್ತಾನ

Update: 2022-12-03 16:38 GMT

ಇಸ್ಲಮಾಬಾದ್, ಡಿ.3: ಪಾಕಿಸ್ತಾನವು ನಿಗದಿತ ಗಡುವಿಗೆ 3 ದಿನ ಮೊದಲೇ 1 ಶತಕೋಟಿ ಡಾಲರ್ ಮೊತ್ತದ ಅಂತರಾಷ್ಟ್ರೀಯ ಸಾಲವನ್ನು ಮರು ಪಾವತಿಸಿ `ಡಿಫಾಲ್ಟ್' (``default'')ಆಗುವುದನ್ನು ತಪ್ಪಿಸಿಕೊಂಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ `ದಿ ಎಕ್ಸ್‍ಪ್ರೆಸ್ ಟ್ರಿಬ್ಯೂನ್' (The Express Tribune) ವರದಿ ಮಾಡಿದೆ.

ನಿಗದಿತ ಗಡುವಿಗೆ 3 ದಿನ ಮೊದಲೇ 1 ಶತಕೋಟಿ ಡಾಲರ್‍ನಷ್ಟು ಸಾಲದ ಮೊತ್ತವನ್ನು ಸಿಟಿ ಗ್ರೂಫ್‍(City Group)ಗೆ ವರ್ಗಾಯಿಸಿದ್ದು ಅಲ್ಲಿಂದ ಸಂಬಂಧಪಟ್ಟ ಖಾತೆಗೆ ಸಂದಾಯವಾಗಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ವಕ್ತಾರ ಅಬಿದ್ ಖಮರ್ (Abid Qamar)ಹೇಳಿದ್ದಾರೆ. ಪಾಕಿಸ್ತಾನದ ವಿದೇಶಿ ವಿನಿಮಯ ಸಂಗ್ರಹ  ಕನಿಷ್ಟ ಮಟ್ಟಕ್ಕೆ ಕುಸಿದಿರುವುದರಿಂದ ಸಾಲ ತೀರಿಸಲಾಗದೆ `ಡಿಫಾಲ್ಟ್' ಪಟ್ಟಿಗೆ ಸೇರ್ಪಡೆಗೊಳ್ಳುವ ಸಾಧ್ಯತೆ ಹೆಚ್ಚಿರುವುದಾಗಿ ಅಂದಾಜಿಸಲಾಗಿತ್ತು. ಡಿಫಾಲ್ಟ್ ಪಟ್ಟಿಗೆ ಸೇರ್ಪಡೆಯಾದರೆ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಆರ್ಥಿಕ ನೆರವು ಪಡೆಯಲು ತೊಡಕಾಗುತ್ತದೆ.

ಪಾಕಿಸ್ತಾನದ ವಿದೇಶಿ ವಿನಿಮಯ ಸಂಗ್ರಹ  ಸಾಕಷ್ಟಿದ್ದು, ಎಲ್ಲಾ ಅಂತರಾಷ್ಟ್ರೀಯ ಸಾಲವನ್ನು ಸಕಾಲದಲ್ಲಿ ಮರುಪಾವತಿಸಲಾಗುತ್ತದೆ ಎಂದು ವಿತ್ತಸಚಿವ ಇಶಾಖ್ ದಾರ್ ಹೇಳಿದ್ದಾರೆ.

Similar News