ವಿಶ್ವಕಪ್: ಪೋಲ್ಯಾಂಡ್‌ಗೆ ಸೋಲು, ಫ್ರಾನ್ಸ್ ಕ್ವಾರ್ಟರ್ ಫೈನಲ್‌ಗೆ ಪ್ರವೇಶ

ಎಂಬಾಪೆ ಅವಳಿ ಗೋಲು

Update: 2022-12-04 17:04 GMT

ದೋಹಾ, ಡಿ.4: 2018ರ ವಿಶ್ವಕಪ್ ಹೀರೊ ಕೀಲಿಯನ್ ಎಂಬಾಪೆ ಗಳಿಸಿದ ಅವಳಿ ಗೋಲು ನೆರವಿನಿಂದ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡ ಪೋಲ್ಯಾಂಡ್ ತಂಡವನ್ನು 3-1 ಗೋಲುಗಳ ಅಂತರದಿಂದ ಮಣಿಸಿ ಫಿಫಾ ವಿಶ್ವಕಪ್‌ನಲ್ಲಿ ಸತತ 2ನೇ ಬಾರಿ ಕ್ವಾರ್ಟರ್ ಫೈನಲ್ ತಲುಪಿದೆ.

ರವಿವಾರ ಅಲ್ ತುಮಾಮ ಸ್ಟೇಡಿಯಮ್‌ನಲ್ಲಿ ನಡೆದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಪರ ಒಲಿವಿಯರ್ ಗಿರೌಡ್ 44ನೇ ನಿಮಿಷದಲ್ಲಿ ಗೋಲು ಗಳಿಸಿ ಮೊದಲಾರ್ಧದಂತ್ಯಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ಈ ಗೋಲಿನ ಮೂಲಕ ಗಿರೌಡ್ 115 ಪಂದ್ಯಗಳಲ್ಲಿ 52ನೇ ಗೋಲು ಗಳಿಸಿ ಫ್ರಾನ್ಸ್ ತಂಡದ ಸಾರ್ವಕಾಲಿಕ ಶ್ರೇಷ್ಠ ಗೋಲ್ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ.

 ಆಸ್ಟ್ರೇಲಿಯ ವಿರುದ್ಧದ ಗ್ರೂಪ್ ಡಿಯ ಆರಂಭಿಕ ಪಂದ್ಯದಲ್ಲಿ ಅವಳಿ ಗೋಲು ಗಳಿಸಿದ್ದ 36ರಹರೆಯದ ಗಿರೌಡ್ ತಮ್ಮ ದೇಶದ ಸಾರ್ವಕಾಲಿಕ ಗರಿಷ್ಠ ಸ್ಕೋರರ್ ಥಿಯೆರಿ ಹೆನ್ರಿ (51 ಗೋಲು) ದಾಖಲೆಯನ್ನು ಸರಿಗಟ್ಟಿದ್ದರು.

ದ್ವಿತೀಯಾರ್ಧದ 74ನೇ ನಿಮಿಷದಲ್ಲಿ ಗೋಲು ಬಾರಿಸಿದ ಕೀಲಿಯನ್ ಎಂಬಾಪೆ ಫ್ರಾನ್ಸ್ ತಂಡದ ಮುನ್ನಡೆಯನ್ನು 2-0ಗೆ ಏರಿಸಿದರು. ಹೆಚ್ಚುವರಿ ಸಮಯದಲ್ಲಿ (90+1) ಇನ್ನೊಂದು ಗೋಲು ಗಳಿಸಿದ ಎಂಬಾಪೆ ಫ್ರಾನ್ಸ್ ಮುನ್ನಡೆಯನ್ನು 3-0ಗೆ ವಿಸ್ತರಿಸಿದರು. ಮಾತ್ರವಲ್ಲ ಪ್ರಸಕ್ತ ಟೂರ್ನಮೆಂಟ್‌ನಲ್ಲಿ 5ನೇ ಗೋಲು ಗಳಿಸಿ ಗಮನ ಸೆಳೆದರು.

ಪೋಲ್ಯಾಂಡ್ ಕೊನೆಯ ಕ್ಷಣದಲ್ಲಿ(90+9) ಪೆನಾಲ್ಟಿ ಕಾರ್ನರ್‌ನಲ್ಲಿ ಸಮಾಧಾನಕರ ಗೋಲು ಗಳಿಸಿತು.

Similar News