ಗೂಗಲ್, ಮೆಟಾ ಬಳಸುವ ಸುದ್ದಿ ವರದಿಗಳಿಗೆ ಶುಲ್ಕ ವಿಧಿಸಲು ನ್ಯೂಝಿಲ್ಯಾಂಡ್ ನಿರ್ಧಾರ

Update: 2022-12-05 11:12 GMT

ವೆಲ್ಲಿಂಗ್ಟನ್ : ಅಗ್ರ ಆನ್‍ಲೈನ್ ಡಿಜಿಟಲ್ ಕಂಪೆನಿಗಳಾದ ಆಲ್ಫಬೆಟ್ ಇಂಕ್‍ನ ಗೂಗಲ್ (Google)  ಹಾಗೂ ಮೆಟಾ (Meta) ಪ್ಲಾಟ್‍ಫಾಮ್ರ್ಸ್ ಇಂಕ್  ತಮ್ಮ ಫೀಡ್‍ಗಳಲ್ಲಿ ಬಳಸುವ ಸ್ಥಳೀಯ ಸುದ್ದಿ ವರದಿಗಳಿಗಾಗಿ  ನ್ಯೂಝಿಲ್ಯಾಂಡ್ ನ (New Zealand) ಮಾಧ್ಯಮ ಸಂಸ್ಥೆಗಳಿಗೆ ಹಣ ಪಾವತಿಸುವಂತೆ ಮಾಡುವ ಕಾನೂನೊಂದನ್ನು ಜಾರಿಗೆ ತರುವುದಾಗಿ ನ್ಯೂಝಿಲ್ಯಾಂಡ್ ಸರ್ಕಾರ ಹೇಳಿದೆ.

ಆಸ್ಟ್ರೇಲಿಯಾ ಮತ್ತು ಕೆನಡಾ ದೇಶಗಳಲ್ಲಿ ಜಾರಿಯಲ್ಲಿರುವ ಇಂತಹುದೇ ಕಾನೂನುಗಳ ಮಾದರಿಯಲ್ಲಿ ನ್ಯೂಝಿಲ್ಯಾಂಡ್ ನಲ್ಲಿಯೂ ಕಾನೂನು ಜಾರಿಗೊಳಿಸಲಾಗುವುದು ಹಾಗೂ ಇದರಿಂದ  ಸ್ಥಳೀಯ ಮಾಧ್ಯಮ ಸಂಸ್ಥೆಗಳೊಂದಿಗೆ ಒಪ್ಪಂದಕ್ಕೆ ಬರಲು ಡಿಜಿಟಲ್ ಪ್ಲಾಟ್‍ಫಾರ್ಮ್‍ಗಳಿಗೆ ಇದು ಪ್ರೋತ್ಸಾಹದಾಯಕವಾಗಲಿವೆ ಎಂದು ನ್ಯೂಝಿಲ್ಯಾಂಡ್ ದೇಶದ ಪ್ರಸಾರ ಸಚವಿ ವಿಲ್ಲೀ ಜ್ಯಾಕ್ಸನ್ ಹೇಳಿದ್ದಾರೆ.

"ಹೆಚ್ಚಿನ ಜಾಹೀರಾತುಗಳು ಆನ್‍ಲೈನ್‍ನಲ್ಲಿಯೇ ಕಾಣಿಸಿಕೊಳ್ಳುವುದರಿಂದ ನ್ಯೂಜಿಲೆಂಡ್‍ನ ಸುದ್ದಿ ಮಾಧ್ಯಮಗಳು, ಪ್ರಮುಖವಾಗಿ ಪ್ರಾದೇಶಿಕ ಮತ್ತು ಸಮುದಾಯ ಆಧರಿತ ಮಾಧ್ಯಮಗಳು ಆರ್ಥಿಕ ಸುಸ್ಥಿರತೆ ಸಾಧಿಸಲು ಹೆಣಗಾಡುವ ಸ್ಥಿತಿಯಿದೆ. ಈ ಮಾಧ್ಯಮಗಳು ಪ್ರಕಟಿಸುವ ಸುದ್ದಿಯಿಂದ ಪ್ರಯೋಜನ ಪಡೆಯುವವರು ಅದಕ್ಕಾಗಿ ಪಾವತಿಸುವುದು ಮುಖ್ಯವಾಗಿದೆ," ಎಂದು ಜ್ಯಾಕ್ಸನ್ ಹೇಳಿದರು.

ಈ ಹೊಸ ಕಾನೂನು ಸಂಸತ್ತಿನಲ್ಲಿ ಮಂಡನೆಯಾಗಿ ಅಲ್ಲಿ ಮತದಾನ ನಡೆದು ಅದು ಲೇಬರ್ ಪಾರ್ಟಿ ಅಧಿಕಾರದಲ್ಲಿರುವ ನ್ಯೂಜಿಲೆಂಡ್‍ನಲ್ಲಿ ಜಾರಿಯಾಗುವ ನಿರೀಕ್ಷೆಯಿದೆ.

ಆಸ್ಟ್ರೇಲಿಯಾ ಇಂತಹುದೇ ಕಾನೂನನ್ನು 2021 ರಲ್ಲಿ ಜಾರಿಗೆ ತಂದಿತ್ತು.

Similar News