ಕೋವಿಡ್ ಮಾನವ ನಿರ್ಮಿತ ಸೋಂಕು ವುಹಾನ್ ಪ್ರಯೋಗಾಲಯದ ವಿಜ್ಞಾನಿಯ ಹೇಳಿಕೆ

Update: 2022-12-05 16:59 GMT

ವಾಷಿಂಗ್ಟನ್, ಡಿ.5: ಕೋವಿಡ್-19 ಮಾನವ ನಿರ್ಮಿತ ವೈರಸ್ ಆಗಿದ್ದು ಅದು ಪ್ರಯೋಗಾಲಯದಿಂದ ಸೋರಿಕೆಯಾಗಿದೆ ಎಂದು ಚೀನಾದ ವುಹಾನ್ ಪ್ರಯೋಗಾಲಯದಲ್ಲಿ ಕಾರ್ಯ ನಿರ್ವಹಿಸಿದ್ದ ಅಮೆರಿಕನ್ ಮೂಲದ ವಿಜ್ಞಾನಿ ಹೇಳಿದ್ದಾರೆ.

ಚೀನಾದ ಸರಕಾರಿ ಸ್ವಾಮ್ಯದ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ(WWI)ಯಿಂದ 2 ವರ್ಷದ ಹಿಂದೆ ಕೋವಿಡ್ ಸೋರಿಕೆಯಾಗಿದೆ ಎಂದು ಅಮೆರಿಕ ಮೂಲದ ಸಂಶೋಧಕ ಆಂಡ್ರ್ಯೂ ಹಫ್ರ ಹೇಳಿಕೆಯನ್ನು ಉಲ್ಲೇಖಿಸಿ `ನ್ಯೂಯಾರ್ಕ್ ಪೋಸ್ಟ್' (``New York Post'')ವರದಿ ಮಾಡಿದೆ.

ಚೀನಾದಲ್ಲಿ ಅಮೆರಿಕ ಸರಕಾರದ ಧನಸಹಾಯದಿಂದ ನಡೆದ ಕೊರೋನ ವೈರಸ್ ಸಂಶೋಧನೆಯಿಂದ ಸಾಂಕ್ರಾಮಿಕ ಹರಡಿದೆ. ಸೂಕ್ತ ಭದ್ರತಾ ವ್ಯವಸ್ಥೆಯಿಲ್ಲದ ವುಹಾನ್ ಪ್ರಯೋಗಾಲಯ(Wuhan Laboratory)ದಲ್ಲಿ ಚೀನಾ ನಡೆಸಿದ ಪ್ರಯೋಗದ ಸಂದರ್ಭ ವೈರಸ್ ಸೋರಿಕೆಯಾಗಿದೆ ಎಂದು `ವುಹಾನ್ ಕುರಿತ ಸತ್ಯ' ('The Truth About Wuhan')ಎಂಬ ಪುಸ್ತಕದಲ್ಲಿ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಹಫ್ ಪ್ರತಿಪಾದಿಸಿದ್ದಾರೆ. ಈ ಪುಸ್ತಕದ ಆಯ್ದಭಾಗಗಳು ಬ್ರಿಟನ್ನ `ದಿ ಸನ್'(``The Sun'') ಪತ್ರಿಕೆಯಲ್ಲಿ ಪ್ರಕಟವಾಗಿದೆ. ಹಫ್  ಸಾಂಕ್ರಾಮಿಕ ರೋಗಗಳನ್ನು ಅಧ್ಯಯನ ಮಾಡುವ ನ್ಯೂಯಾರ್ಕ್ ಮೂಲದ ಇಕೊಹೆಲ್ತ್ ಅಲಯನ್ಸ್ ನ ಮಾಜಿ ಉಪಾಧ್ಯಕ್ಷರಾಗಿದ್ದಾರೆ.

 ಇದು ತಳೀಯವಾಗಿ ರೂಪುಗೊಂಡ ವೈರಸ್ ಎಂಬುದು ಪ್ರಥಮ ದಿನದಿಂದಲೇ ಚೀನಾಕ್ಕೆ ತಿಳಿದಿತ್ತು. ಈ ಅಪಾಯಕಾರಿ ಜೈವಿಕ ತಂತ್ರಜ್ಞಾನವನ್ನು ಚೀನೀಯರಿಗೆ  ವರ್ಗಾವಣೆಗೊಳಿಸಿರುವುದಕ್ಕೆ ಅಮೆರಿಕವನ್ನು ದೂಷಿಸಬೇಕು. ನಾವು ಅವರಿಗೆ ಜೈವಿಕ ಅಸ್ತ್ರ ತಂತ್ರಜ್ಞಾನವನ್ನು ವರ್ಗಾಯಿಸುತ್ತಿದ್ದೇವೆ ಎಂಬ ವಿಷಯ ತಿಳಿದಾಗ ನಾನು ಭಯಭೀತನಾಗಿದ್ದೆ ಎಂದು ಹಫ್ ಹೇಳಿರುವುದಾಗಿ ವರದಿಯಾಗಿದೆ.

Similar News