ಯುಎಇ ಅಧ್ಯಕ್ಷರ ಖತರ್ ಪ್ರವಾಸ ಆರಂಭ; 4 ವರ್ಷಗಳ ಪ್ರಾದೇಶಿಕ ದಿಗ್ಬಂಧನದ ಅಂತ್ಯದ ಬಳಿಕ ಮೊದಲ ಭೇಟಿ

Update: 2022-12-05 17:19 GMT

ದೋಹ, ಡಿ.5: ಯುಎಇ ಅಧ್ಯಕ್ಷ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್-ನಹ್ಯಾನ್ ಸೋಮವಾರ ಖತರ್‌ಗೆ ಆಗಮಿಸಿದ್ದು ಸುಮಾರು 4 ವರ್ಷಗಳ ಪ್ರಾದೇಶಿಕ ದಿಗ್ಬಂಧನದ ಅಂತ್ಯದ ಬಳಿಕ ಯುಎಇ ಅಧ್ಯಕ್ಷರು ಖತರ್‌ಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ.

ಖತರ್‌ನಲ್ಲಿ ಇದೀಗ ನಡೆಯುತ್ತಿರುವ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಸಂದರ್ಭದಲ್ಲೇ ದೇಶಕ್ಕೆ ಆಗಮಿಸಿರುವ ಯುಎಇ ಅಧ್ಯಕ್ಷರನ್ನು ಖತರ್‌ನ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್-ಥನಿ ಸ್ವಾಗತಿಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಎರಡು ರಾಷ್ಟ್ರಗಳು ಮತ್ತು ಅದರ ಜನರ ನಡುವೆ ಅಸ್ತಿತ್ವದಲ್ಲಿರುವ ಸಹೋದರ ಸಂಬಂಧವನ್ನು ಈ ಭೇಟಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ಯುಎಇಯ ಸರಕಾರಿ ಸ್ವಾಮ್ಯದ ‘ವಾಮ್’ ಸುದ್ದಿಸಂಸ್ಥೆ ವರದಿ ಮಾಡಿದೆ.

ಇತ್ತೀಚಿನ ದಿನಗಳಲ್ಲಿ ಖತರ್ ಮತ್ತು ಯುಎಇ ನಡುವಿನ ದ್ವಿಪಕ್ಷೀಯ ಸಂಬಂಧ ಸುಧಾರಿಸಿದ್ದು, ಮೇ ತಿಂಗಳಿನಲ್ಲಿ ಅಬುಧಾಬಿಯಲ್ಲಿ ನಡೆದಿದ್ದ ಶೇಖ್ ಖಲೀಫಾ ಅವರ ಅಂತ್ಯಸಂಸ್ಕಾರದಲ್ಲಿ ಖತರ್ ಅಮೀರ್ ಪಾಲ್ಗೊಂಡಿದ್ದರು. ಅಲ್ಲದೆ, ಇದೀಗ ಖತರ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಸೌದಿ ಅರೆಬಿಯದ ಪಂದ್ಯವನ್ನು ವೀಕ್ಷಿಸಲು ಸೌದಿಯ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಆಗಮಿಸಿದ್ದರು.

Similar News