ಡಿ.19ರಂದು ರೈತ ಘರ್ಜನಾ ರ‍್ಯಾಲಿ- ದೆಹಲಿ ಚಲೋ | ದ.ಕ. ಜಿಲ್ಲೆಯಿಂದಲೂ ನೂರಾರು ರೈತರು ಭಾಗಿ: ಭಾಕಿಸಂ

Update: 2022-12-06 07:18 GMT

ಮಂಗಳೂರು: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿ ಡಿ. 19ರಂದು ಹಮ್ಮಿಕೊಳ್ಳಲಾಗಿರುವ ರೈತ ರೈತ ಘರ್ಜನಾ ರ‍್ಯಾಲಿ- ದೆಹಲಿ ಚಲೋ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲೆಯ ನೂರಾರು ರೈತರು ಭಾಗವಹಿಸಲಿದ್ದಾರೆ ಎಂದು ಭಾರತೀಯ ಕಿಸಾನ್ ಸಂಘದ ದ.ಕ. ಜಿಲ್ಲಾ ಘಟಕ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಪ್ರಾಂತ ಸಂಘಟನಾ ಕಾರ್ಯದರ್ಶಿ ನಾರಾಯಣ ಸ್ವಾಮಿ, ರೈತರು ಉತ್ಪನ್ನಗಳಿಗೆ ಮಾಡುವ ಖರ್ಚಿನ ಆಧಾರದಲ್ಲಿ ಬೆಲೆ ನಿಗದಿಪಡಿಸಬೇಕೆಂಬುದು ರೈತರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ ಎಂದರು.

ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ರೈತರು ಬೆಳೆದ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಸಿಗುವಂತಾಗಬೇಕು. ಕೃಷಿಗೆ ಬಳಸುವ ಒಳ ಸುರಿಗಳು, ಯಂತ್ರೋಪಕರಣಗಳು, ಕೃಷಿ ಪರಿಕರಗಳು, ಪಂಪ್ ಸೆಟ್‌ಗಳು, ಹನಿ ನೀರಾವರಿ ಪರಿಕರಗಳ ಮೇಲಿನ ಜಿಎಸ್‌ಟಿಯನ್ನು ರದ್ದುಗೊಳಿಸಬೇಕು. ಕಿಸಾನ್ ಸಮ್ಮಾನ್ ಯೋಜನೆಯ ಮೊತ್ತವನ್ನು ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಿಸಬೇಕು ಸೇರಿದಂತೆ ಇತರ ಹಲವಾರು ಬೇಡಿಕೆಗಳನ್ನು ಕೇಂದ್ರದ ಗಮನಕ್ಕೆ ತರಲಾಗುವುದು ಎಂದರು.

ರೈತರಿಗೆ ತಮ್ಮ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದ ಕಾರಣ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ರೈತರು ಆತ್ಮಹತ್ಯೆಯ ಪ್ರಕರಣಗಳು ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಸ್ಯೆಗಳನ್ನು ಎದುರಿಸುವ ಆತಂಕದಲ್ಲೇ ದಿನ ಕಳೆಯುವಂತಾಗಿದೆ. ದ.ಕ. ಜಿಲ್ಲೆಯನ್ನೇ ಗಮನಕ್ಕೆ ತೆಗೆದುಕೊಂಡರೆ ಹಿಂದೆ ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದ್ದ ಭತ್ತದ ಬೆಳೆ ಕುಸಿದಿದೆ. ರೈತರ ಬಗ್ಗೆ ಸರಕಾರ ಕಾಳಜಿ ವಹಿಸಿ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಈ ದೆಹಲಿ ಚಲೋ ಕಾರ್ಯಕ್ರಮ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಶಾಂತಿ ಪ್ರಸಾದ್ ಹೆಗ್ಡೆ, ಅಂಬುಜಾಕ್ಷ, ಸುಬ್ರಾಯ ಬಿ.ಎಸ್., ಜಯಾನಂದ ಉಪಸ್ಥಿತರಿದ್ದರು.

Similar News