ಶಾಹಿ ಮಸ್ಜಿದ್ ಈದ್ಗಾದಲ್ಲಿ ಹನುಮಾನ ಚಾಲಿಸ್ ಪಠಿಸಲು ಯತ್ನ : ಹಿಂದೂ ಮಹಾಸಭಾ ನಾಯಕನ ಬಂಧನ

Update: 2022-12-06 15:40 GMT

ಮಥುರಾ, ಡಿ. 6: ಮಥುರಾದ ಶಾಹಿ ಮಸ್ಜಿದ್ ಈದ್ಗಾ(Shahi Masjid Eidgah)ದಲ್ಲಿ ಹನುಮಾನ್ ಚಾಲೀಸ್ ಪಠಿಸಲು ಪ್ರಯತ್ನಿಸಿದ ಆರೋಪದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾದ ನಾಯಕನನ್ನು ಉತ್ತರಪ್ರದೇಶ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸದ 30ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಈ ಮಸೀದಿಯಲ್ಲಿ ಹನುಮಾನ್ ಚಾಲೀಸ್ ಪಠಿಸುವಂತೆ ಮಥುರಾ ನಿವಾಸಿಗಳಿಗೆ ಹಿಂದೂ ಮಹಾಸಭಾ ಕರೆ ನೀಡಿತ್ತು.

ಮಂಗಳವಾರ ಬೆಳಗ್ಗೆ ಮಸೀದಿಗೆ ತೆರಳುತ್ತಿದ ಸಂಘಟನೆಯ ಆಗ್ರಾ ವಲಯದ ಉಸ್ತುವಾರಿ ಸೌರಭ್ ಶರ್ಮಾ(Saurabh Sharma) ಅವರನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ (ನಗರ) ಮಾರ್ತಂಡ್ ಸಿಂಗ್ (Marthand Singh)ಅವರು ತಿಳಿಸಿದ್ದಾರೆ.

ಸಂಘಟನೆಯ 7ರಿಂದ 8 ಮಂದಿ ನಾಯಕರನ್ನು ನಗರದ ವಿವಿಧ ಭಾಗಗಳಲ್ಲಿರುವ ಅವರ ನಿವಾಸದಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಾಹಿ ಮಸ್ಜಿದ್ ಈದ್ಗಾದಲ್ಲಿ ಮುಸ್ಲಿಮರು ಪ್ರಾರ್ಥಿಸುವುದಕ್ಕೆ ನಿಷೇಧ ವಿಧಿಸುವಂತೆ ಕೋರಿ ದೂರುದಾರರು ಮಥುರಾ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದಾರೆ. ಇದು ಹಿಂದೂಗಳ ಆರಾಧ್ಯ ದೇವರಾದ ಕೃಷ್ಣನ ಜನ್ಮ ಸ್ಥಳ ಎಂದು ಅವರು ದೂರಿನಲ್ಲಿ ಪ್ರತಿಪಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಮಸೀದಿ ಕೋಮು ಸೂಕ್ಷ್ಮ ಸ್ಥಳವಾಗಿದೆ.

ಮಸೀದಿಯಲ್ಲಿ ಹನುಮಾನ್ ಚಾಲೀಸ್ (Marthand Singh)ಪಠಿಸುವ ತನ್ನ ಯೋಜನೆಯನ್ನು ಹಿಂದೂ ಮಹಾಸಭಾ ಘೋಷಿಸಿದ ಬಳಿಕ ತೀವ್ರ ಮುನ್ನೆಚ್ಚರಿಕೆ ವಹಿಸುವಂತೆ  ಮಥುರಾ ಜಿಲ್ಲಾಡಳಿತ ಪೊಲೀಸರಿಗೆ ನಿರ್ದೇಶಿಸಿದೆ. ಅನುಮತಿ ಇಲ್ಲದೆ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪುಗೂಡುವುದಕ್ಕೆ ನಿಷೇಧ ವಿಧಿಸಿ ಜಿಲ್ಲಾಧಿಕಾರಿ ಪುಲ್ಕಿತ್ ಖಾರೆ ಅವರು ಡಿಸೆಂಬರ್ 1ರಂದು ಆದೇಶ ಜಾರಿ ಮಾಡಿದ್ದಾರೆ. ಈ ಆದೇಶ ಜನವರಿ 28ರ ವರೆಗೆ ಅಸ್ತಿತ್ವದಲ್ಲಿ ಇರಲಿದೆ.  

Similar News