ಚಳಿಗಾಲದ ಅಧಿವೇಶನ : ಬೆಲೆ ಏರಿಕೆ, ನಿರುದ್ಯೋಗ, ಭಾರತ-ಚೀನ ಉದ್ವಿಗ್ನತೆ ಕುರಿತು ಚರ್ಚಿಸಲು ಪ್ರತಿಪಕ್ಷಗಳ ಆಗ್ರಹ

Update: 2022-12-06 15:45 GMT

ಹೊಸದಿಲ್ಲಿ, ಡಿ. 6: ಡಿಸೆಂಬರ್ 7ರಂದು ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದ ಸಂದರ್ಭ ಬೆಲೆ ಏರಿಕೆ, ನಿರುದ್ಯೋಗ ಹಾಗೂ ಭಾರತ-ಚೀನ ಗಡಿ ಉದ್ವಿಗ್ ನತೆ ಕುರಿತು ಚರ್ಚೆ ನಡೆಸಬೇಕು ಎಂದು ಪ್ರತಿಪಕ್ಷಗಳು ಮಂಗಳವಾರ ಆಗ್ರಹಿಸಿವೆ.

ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಆಯೋಜಿಸಿದ್ದ ಸರ್ವ ಪಕ್ಷಗಳ ಸಭೆಯಲ್ಲಿ ಈ ಆಗ್ರಹ ಕೇಳಿ ಬಂದಿದೆ. ಈ ಸಭೆಯಲ್ಲಿ 30ಕ್ಕೂ ಅಧಿಕ ಪಕ್ಷಗಳ ನಾಯಕರು ಪಾಲ್ಗೊಂಡಿದ್ದರು.

ರಕ್ಷಣಾ ಸಚಿವ ಹಾಗೂ ಲೋಕಸಭೆಯಲ್ಲಿ ಬಿಜೆಪಿಯ ಉಪ ನಾಯಕ ರಾಜನಾಥ್ ಸಿಂಗ್ (Rajnath Singh)ಸಭೆಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಸಭೆಯಲ್ಲಿ ಸದನದ ನಾಯಕ ಪಿಯೂಷ್ ಗೋಯಲ್ (Piyush Goyal)ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ(Prahlad Joshi) ಸರಕಾರವನ್ನು ಪ್ರತಿನಿಧಿಸಿದ್ದರು.

ಸಭೆಯ ಬಳಿಕ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ (Adhir Ranjan Chowdhury)ಸುದ್ದಿಗಾರರೊಂದಿಗೆ ಮಾತನಾಡಿ, ದೇಶದ ಮುಂದೆ ನಿರೋದ್ಯೋಗ, ಬೆಲೆ ಏರಿಕೆಯಂತಹ ಹಲವು ಸಮಸ್ಯೆಗಳು ಇವೆ. ಕೇಂದ್ರ ಸರಕಾರ ಜನರಿಗೆ ಉತ್ತರ ನೀಡಬೇಕಾಗಿದೆ ಎಂದರು.

ಭಾರತ-ಚೀನಾ ಗಡಿ ಬಿಕ್ಕಟ್ಟಿನ ಬಗ್ಗೆ ಕೇಂದ್ರ ಸರಕಾರ ಪ್ರತಿಪಕ್ಷಗಳಿಗೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ ಎಂದು ಅವರು ಆರೋಪಿಸಿದರು.

‘‘ಸದನದಲ್ಲಿ ಇದರ ಬಗ್ಗೆ ಹಾಗೂ ಕಾಶ್ಮೀರ ಪಂಡಿತರ ಹತ್ಯೆಯ ಬಗ್ಗೆ ಕೂಡ ಚರ್ಚೆ ನಡೆಸುವಂತೆ ನಾವು ಆಗ್ರಹಿಸಿದ್ದೇವೆ’’ ಎಂದು ಅವರು ತಿಳಿಸಿದರು.

ಚಳಿಗಾಲದ ಅಧಿವೇಶನ ಬುಧವಾರ ಆರಂಭವಾಗಲಿದೆ ಹಾಗೂ ಡಿಸೆಂಬರ್ 29ರ ವರೆಗೆ ಮುಂದುವರಿಯಲಿದೆ.  23 ದಿನಗಳಲ್ಲಿ 17 ಬೈಠಕ್ ನಡೆಯಲಿದೆ.

Similar News