2023 ವಿಧಾನಸಭಾ ಚುನಾವಣೆ | ಕೆಆರ್‌ಎಸ್ ಪಕ್ಷದಿಂದ ಮಹಿಳಾ ಅಭ್ಯರ್ಥಿಗಳಿಗೆ ಆದ್ಯತೆ: ಅಲೆಕ್ಸಾಂಡರ್

Update: 2022-12-07 09:10 GMT

ಮಂಗಳೂರು, ಡಿ.7: ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಕೆಆರ್‌ಎಸ್ ಪಕ್ಷದಿಂದ ಮಹಿಳಾ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಈ ನಿಟ್ಟಿನಲ್ಲಿ ಸಂದರ್ಶನ ನಡೆಸಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ರಾಜ್ಯ ಮಟ್ಟದಲ್ಲಿ ಆರಂಭಿಸಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಅಲೆಕ್ಸಾಂಡರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಅವರು, ಈಗಾಗಲೇ ರಾಜ್ಯದಲ್ಲಿ 170ಕ್ಕೂ ಅಧಿಕ ಅಕಾಂಕ್ಷಿ ಅಭ್ಯರ್ಥಿಗಳ ಸಂದರ್ಶನ ನಡೆಸಿ, 60 ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಘೋಷಣೆ ಮಾಡಲಾಗಿದೆ ಎಂದವರು ಹೇಳಿದರು.

ಈಗಾಗಲೇ ಘೋಷಣೆ ಮಾಡಲಾಗಿರುವ ಸಂಭಾವ್ಯ ಅಭ್ಯರ್ಥಿಗಳಲ್ಲಿ ಶೇ.15ರಷ್ಟು ಮಹಿಳೆಯರು. ಇದೀಗ ದ.ಕ. ಜಿಲ್ಲೆಯಲ್ಲಿ ಡಿ.10 ಮತ್ತು 11ರಂದು ಸಂಭಾವ್ಯ ಅಭ್ಯರ್ಥಿಗಳ ಸಂದರ್ಶನ ನಡೆಯಲಿದೆ. ಇದಕ್ಕಾಗಿ ಪುರುಷರಿಗೆ 5,000 ರೂ., ಮಹಿಳೆಯರಿಗೆ 2,500 ರೂ. ಶುಲ್ಕ ವಿಧಿಸಲಾಗಿದೆ. ರಾಜ್ಯದ ನೆಲ, ಜಲ, ಬಾಷಣೆ, ಅರಣ್ಯ ಉಳಿಸಲು, ಸ್ವಚ್ಛ, ಪ್ರಾಮಾಣಿಕ ಮತ್ತು ನೈತಿಕ ರಾಜಕಾರಣದಲ್ಲಿ ಆಸಕ್ತಿ ಇರುವವರು ಸಂದರ್ಶನದಲ್ಲಿ ಭಾಗವಹಿಸಬಹುದು ಎಂದು ಅಲೆಕ್ಸಾಂಡರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಹ್ಯಾರಿ ಪ್ರವೀಣ್, ವಿಶ್ವನಾಥ್, ಯಶೋಧ, ಶಶಿಕಲಾ ಶೆಟ್ಟಿ ಉಪಸ್ಥಿತರಿದ್ದರು.

Similar News