'ಸಾಂಕ್ರಾಮಿಕ ಅವಧಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ನೇಮಕಾತಿ': 20,000 ಉದ್ಯೋಗಿಗಳ ವಜಾಗೆ ಮುಂದಾದ ಅಮೆಝಾನ್; ವರದಿ

Update: 2022-12-07 13:33 GMT

ಹೊಸದಿಲ್ಲಿ: ಮುಂದಿನ ತಿಂಗಳುಗಳಲ್ಲಿ ಕಾರ್ಪೊರೇಟ್ ಅಧಿಕಾರಿಗಳು ಸೇರಿದಂತೆ 20,000 ಉದ್ಯೋಗಿಗಳನ್ನು ಅಮೆಝಾನ್ (Amazon) ವಜಾಗೊಳಿಸುವ ಸಾಧ್ಯತೆ ಇದೆ ಎಂದು ComputerWorld ವರದಿ ಮಾಡಿದೆ.

ಸಾಂಕ್ರಾಮಿಕದ ಅವಧಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ನೇಮಕಾತಿ ಮಾಡಿಕೊಂಡಿರುವುದರಿಂದ ವೆಚ್ಚ ಕಡಿತದ ಭಾಗವಾಗಿ ಅಮೆಝಾನ್ ಉದ್ಯೋಗ ಕಡಿತಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.

ಜಗತ್ತಿನಾದ್ಯಂತ 1.6 ದಶಲಕ್ಷ ಉದ್ಯೋಗಿಗಳ ಹೊಂದಿರುವ ದೈತ್ಯ ತಂತ್ರಜ್ಞಾನ ಕಂಪನಿ ಅಮೆಝಾನ್, ಹಲವಾರು ವಿಭಾಗಗಳಿಂದ ತನ್ನ ಸಿಬ್ಬಂದಿಗಳನ್ನು ಮನೆಗೆ ಕಳಿಸುವ ಸಾಧ್ಯತೆ ಇದ್ದು, ಈ ಪೈಕಿ ಕಾರ್ಪೊರೇಟ್ ಅಧಿಕಾರಿಗಳು ಹಾಗೂ ತಂತ್ರಜ್ಞಾನ ಸಿಬ್ಬಂದಿಗಳೂ ಒಳಗೊಂಡಿದೆ.

ಈ ಕ್ರಮದಿಂದ ಕಂಪನಿಯ ಹಲವಾರು ಹಂತಗಳಲ್ಲಿ ದುಡಿಯುತ್ತಿರುವ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಈ ಕುರಿತು ಮಾಹಿತಿ ಹೊಂದಿರುವ ಹೆಸರೇಳಲಿಚ್ಛಿಸದ ಮೂಲವೊಂದನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.

ಮೂಲಗಳ ಪ್ರಕಾರ, ವಜಾ ಆದೇಶ ಪಡೆಯಲಿರುವ ಉದ್ಯೋಗಿಗಳಿಗೆ 24 ಗಂಟೆ ಅವಧಿಯ ನೋಟೀಸ್ ಜಾರಿಯಾಗಲಿದ್ದು, ಕಂಪನಿಯ ಗುತ್ತಿಗೆ ಕರಾರಿನನ್ವಯ ಅಂಥವರಿಗೆ ಪರಿಹಾರ ವೇತನವನ್ನು ನೀಡಲಾಗುತ್ತದೆ.

ಕೆಲ ದಿನಗಳ ಹಿಂದೆ ಉದ್ಯೋಗಿಗಳ ಕಾರ್ಯನಿರ್ಹಣೆಯಲ್ಲಿನ ಲೋಪಗಳನ್ನು ಪತ್ತೆ ಹಚ್ಚುವಂತೆ ತನ್ನ ವ್ಯವಸ್ಥಾಪಕರಿಗೆ ಅಮೆಝಾನ್ ಸೂಚಿಸಿದೆ. ಸಾಮೂಹಿಕ ವಜಾ ಅಪಾಯದ ಕುರಿತು ಮಾಹಿತಿ ಹೊಂದಿರುವ ಮೂಲದ ಪ್ರಕಾರ, ಉದ್ಯೋಗ ಕಡಿತ ಸಂಗತಿ ತಿಳಿಯುತ್ತಿದ್ದಂತೆಯೇ ಕೆಲಸ ನಿರ್ವಹಿಸುತ್ತಿರುವ ಉದ್ಯೋಗಿಗಳಲ್ಲಿ ಭೀತಿ ಶುರುವಾಗಿದೆ.

ಅಮೆಝಾನ್ ನಿರ್ದಿಷ್ಟ ವಿಭಾಗ ಅಥವಾ ಪ್ರದೇಶದಲ್ಲಿ ಉದ್ಯೋಗ ಕಡಿತದ ಗುರಿ ಹೊಂದಿದ್ದು, ಈ ನಡೆಯಿಂದ ಉದ್ಯಮದಲ್ಲಿ ಕೆಲಸ ನಿರ್ವಹಿಸುತ್ತಿರುವ ಉದ್ಯೋಗಿಗಳು ಬಾಧಿತರಾಗುವ ಸಾಧ‍್ಯತೆ ಇದೆ ಎಂದು ಹೇಳಲಾಗಿದೆ.

ಈ ಬಾರಿಯ ಹಬ್ಬದ ಋತುವಿನಲ್ಲಿ ಮಾರಾಟದ ವೇಗ ಕುಂಠಿತಗೊಳ್ಳಲಿದೆ ಎಂದು ಅಕ್ಟೋಬರ್ ನಲ್ಲಿ ಬಿಡುಗಡೆಯಾಗಿದ್ದ ತನ್ನ ಮುನ್ನೋಟದ ವರದಿಯಲ್ಲಿ ಅಮೆಝಾನ್ ಹೇಳಿತ್ತು.

ಬೆಲೆ ಏರಿಕೆ ತೀವ್ರತೆಯ ಕಾರಣಕ್ಕೆ ಗ್ರಾಹಕರು ಹಾಗೂ ವ್ಯಾಪಾರಸ್ಥರ ಬಳಿ ಹಣದ ಕೊರತೆ ಉಂಟಾಗಿರುವುದರಿಂದ ವ್ಯಾಪಾರ ಹಿಂಜರಿಕೆ ಉಂಟಾಗಿದೆ ಎಂದು ಅಮೆಝಾನ್ ಪ್ರತಿಪಾದಿಸಿತ್ತು.

ಈ ಹಿನ್ನೆಲೆಯಲ್ಲಿ ನಷ್ಟದಲ್ಲಿರುವ ಘಟಕಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಎಚ್ಚರಿಕೆ ನೀಡಿದ್ದ ಇ-ಕಾಮರ್ಸ್ ದೈತ್ಯ ಕಂಪನಿ ಅಮೆಝಾನ್, ಕಂಪನಿಯ ಒಳಗೇ ಬೇರೆ ಉದ್ಯೋಗಾವಕಾಶಗಳ ಕಡೆಗೆ ಗಮನ ಹರಿಸಬೇಕು ಎಂದು ಸೂಚಿಸಿತ್ತು.

ಗ್ರಾಹಕರು ಸಾಂಕ್ರಾಮಿಕ ಪೂರ್ವ ಖರೀದಿ ಪ್ರವೃತ್ತಿಗೆ ಮರಳಿದ ನಂತರವೂ ಅಮೆಝಾನ್ ಇ-ಕಾಮರ್ಸ್ ಬೆಳವಣಿಗೆಯಲ್ಲಿ ತೀವ್ರವಾದ ಹಿಂಜರಿಕೆ ದಾಖಲಿಸುತ್ತಿದೆ. ಈ ಹಿನ್ನೆಲೆಯಲ್ಲಿ ದಾಸ್ತಾನು ಮಳಿಗೆಗಳ ಪ್ರಾರಂಭವನ್ನು ಕೈಬಿಟ್ಟಿದ್ದು, ಚಿಲ್ಲರೆ ಸಮೂಹಗಳಲ್ಲಿ ನೇಮಕಾತಿ ಪ್ರಕ್ರಿಯೆಯನ್ನೂ ಸ್ಥಗಿತಗೊಳಿಸಿದೆ.

Similar News