ಕಲುಷಿತ ನೀರು ಸೇವಿಸಿ ಬಾಲಕ ಮೃತ್ಯು, 109 ಮಂದಿ ಆಸ್ಪತ್ರೆಗೆ ದಾಖಲು

Update: 2022-12-07 13:37 GMT

ಜೈಪುರ: ರಾಜಸ್ತಾನದ ಕರೌಲಿ ಜಿಲ್ಲೆಯ ಕೆಲ ಭಾಗಗಳಿಗೆ ಸರ್ಕಾರಿ ಕೊಳವೆ ಮಾರ್ಗದ ಮೂಲಕ ಪೂರೈಕೆಯಾಗಿರುವ ಕಲುಷಿತ ನೀರು ಸೇವಿಸಿ ಓರ್ವ ಬಾಲಕ ಸಾವಿಗೀಡಾಗಿದ್ದು, ವಾಂತಿ ಹಾಗೂ ಅತಿಸಾರದಿಂದ ಬಳಲುತ್ತಿದ್ದ 109 ಮಂದಿಯನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು timesofindia ವರದಿ ಮಾಡಿದೆ.

ಸಂತ್ರಸ್ತ ಶಾಗಂಜ್ ಪ್ರದೇಶದಿಂದ ಹಿಂದೌನ್, ಕರೌಲಿ ಮತ್ತು ಜೈಪುರ ಆಸ್ಪತ್ರೆಗಳಿಗೆ ಕಳೆದ ಮೂರು ದಿನಗಳಿಂದ 30 ಮಕ್ಕಳು ಸೇರಿದಂತೆ ಹಲವು ರೋಗಿಗಳನ್ನು ದಾಖಲಿಸಲಾಗಿದೆ. ಈ ಪೈಕಿ ಓರ್ವ ಬಾಲಕ ಮಂಗಳವಾರ ಮೃತಪಟ್ಟಿದ್ದಾನೆ.

“ಅತಿಸಾರದಿಂದ ಬಳಲುತ್ತಿದ್ದ ಬಾಲಕನಿಗೆ ಸ್ಥಳೀಯ ವೈದ್ಯರು ಔಷಧ ನೀಡಿದ್ದರು. ಆದರೆ, ಆತನ ಆರೋಗ್ಯ ಕ್ಷೀಣಿಸಿದಾಗ ಆತನನ್ನು ಹಿಂದೌನ್ ನ ಜಿಲ್ಲಾಸ್ಪತ್ರೆಗೆ ಕರೆ ತರಲಾಗಿತ್ತು. ಆದರೆ, ಆ ಹೊತ್ತಿಗೆ ಆತ ಕೊನೆಯುಸಿರೆಳೆದಿದ್ದ” ಎಂದು ಕರೌಲಿ ಜಿಲ್ಲಾಧಿಕಾರಿ ಅಂಕಿತ್ ಸಿಂಗ್ ತಿಳಿಸಿದ್ದಾರೆ.

ಕೊಳವೆ ಮಾರ್ಗದ ಮೂಲಕ ನೀರು ಪೂರೈಸುವುದನ್ನು ಸದ್ಯ ಸ್ಥಗಿತಗೊಳಿಸಲಾಗಿದೆ. ನೀರಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗೆ ಕಾಯಲಾಗುತ್ತಿದೆ ಎಂದು ತಿಳಿಸಿರುವ ಜಿಲ್ಲಾಧಿಕಾರಿ, ನೀರಿನ ಅಗತ್ಯವನ್ನು ಪೂರೈಸಲು ಟ್ಯಾಂಕರ್ ಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ನೀರು ಕಲುಷಿತಗೊಳ್ಳಲು ಕಾರಣವೇನು ಎಂದು ಈವರೆಗೆ ತಿಳಿದು ಬಂದಿಲ್ಲ.

Similar News